17th JULY-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ

 

CLICK HERE TO JOIN NIALP FOUNDATION COURSE-2019

 

ಜೆನೆರಿಕ್‌ ಔಷಧ ಜನರಿಗೆ ಸಮರ್ಪಕವಾಗಿ ತಲಪುತ್ತಿದೆಯೇ ?

(  GETTING THE GENERIC DRUG PLAN RIGHT)

 

SOURCE- THE HINDU https://www.thehindu.com/todays-paper/tp-opinion/getting-the-generic-drug-plan-right/article24363292.ece

 

ಸನ್ನಿವೇಶ

  • ಪ್ರಧಾನಮಂತ್ರಿ ಜನೌಷಧಿಯನ್ನು ಎಲ್ಲ ಮೆಡಿಕಲ್‌ ಮಳಿಗೆಗಳಲ್ಲಿ ಮಾರಬೇಕೆಂದು ಕೇಂದ್ರ ಸರಕಾರ ಆದೇಶವನ್ನು ಹೊರಡಿಸಲಿದೆಯಂತೆ. ಔಷಧಿ ಅಂಗಡಿಗಳಲ್ಲಿ ಮತ್ತು ಆಸ್ಪತ್ರೆಯಲ್ಲಿ ಲಭ್ಯ ವಿರುವ ಔಷಧಿ, ಅದರ ದುಬಾರಿ ದರದ ಬಗ್ಗೆ ಜನಸಾಮಾನ್ಯರಿಗೆ ತಿಳಿದೇ ಇದೆ. ಹೆಚ್ಚಿನ ಔಷಧಿಗಳು ದುಬಾರಿಯಾಗಿದ್ದು ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಇದನ್ನು ಹೋಗಲಾಡಿಸುವ ಉದ್ದೇಶದಿಂದ “ಪ್ರಧಾನಮಂತ್ರಿ ಜನೌಷಧಿ ಪರಿಯೋಜನೆ’ಯನ್ನು ಆರಂಭಿಸಲಾಯ್ತು. ಈ ಯೋಜನೆಯಡಿ, ಶೀತ, ಜ್ವರದಿಂದ, ಕ್ಯಾನ್ಸರ್‌ವರೆಗೂ ಔಷಧಿಗಳು ಲಭ್ಯ.
  • ವೈದ್ಯರು ಸೂಚಿಸಿದ ದುಬಾರಿ ಔಷಧಿಗಳಿಂದಾಗಿ, ಚಿಕಿತ್ಸೆ ಅಪೂರ್ಣಗೊಂಡು ಬಡ ರೋಗಿಗಳು ಆಸ್ಪತ್ರೆಯಿಂದ ಮನೆಗೆ ಬಿಡುಗಡೆಗೊಂಡ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ರೋಗಿಗಳಿಗೆ ಈ ಯೋಜನೆಯಿಂದ ಲಾಭವಿದೆ. ವೈದ್ಯಶಾಸ್ತ್ರೀಯ ಮೌಲ್ಯ ಅಥವಾ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕೈಗೆಟಕುವ ದರದಲ್ಲಿ ಜೆನೆರಿಕ್‌ ಔಷಧಿಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

 

ಏನಿದು ಜೆನೆರಿಕ್‌ ಔಷಧ?

  • ಔಷಧದ ರಾಸಾಯನಿಕ ಹೆಸರೇ “ಜೆನೆರಿಕ್‌’ ಇದರಲ್ಲಿ ಔಷಧ ತಯಾರಕರು ಇಟ್ಟ ಬ್ರ್ಯಾಂಡ್‌ ಹೆಸರು ಇರುವುದಿಲ್ಲ. ಜೆನೆರಿಕ್‌ ಔಷಧ ಸಾಮಾನ್ಯ ಔಷಧಗಳಂತೆಯೇ ಇರುತ್ತದೆ. ಇದರಲ್ಲಿ ಔಷಧ ಅಂಶಗಳು, ಅವುಗಳ ಪರಿಣಾಮ ಎಲ್ಲವೂ ಒಂದೇ. ಆದರೆ ತಯಾರಿಕೆದಾರರ ಬ್ರ್ಯಾಂಡ್‌ ಹೆಸರು ಮಾತ್ರ ಇದರಲ್ಲಿ ಇರುವುದಿಲ್ಲ.
  • ಉದಾಹರಣೆಗೆ “ಪಾರಾಸಿಟಮಲ್‌’ ಎಂಬುದು ಜ್ವರದ ಔಷಧದ ಜೆನೆರಿಕ್‌ ಹೆಸರು.ಪ್ಯಾನಡೊಲ್‌, ಕಾಲ್ಪೋಲ್‌ ಇತ್ಯಾದಿಗಳು ಪಾರಾಸಿಟಮಲ್‌ನ ಬ್ರ್ಯಾಂಡ್‌ ಹೆಸರುಗಳು.

 

 

 ಜೆನೆರಿಕ್‌ ಮತ್ತು ಬ್ರ್ಯಾಂಡೆಡ್‌ ಔಷಧದ ವ್ಯತ್ಯಾಸವೇನು?

  • ಒಂದು ಔಷಧ ತಯಾರಿಕಾ ಕಂಪನಿ ಹೊಸ ಔಷಧವನ್ನು ಹಲವು ವರ್ಷ ಸಂಶೋಧನೆ ನಡೆಸಿ ಆವಿಷ್ಕರಿಸಿರುತ್ತದೆ. ಇದಕ್ಕೆ ಅದು ನಿರ್ದಿಷ್ಟ ಅವಧಿಗೆ ಹಕ್ಕುಸ್ವಾಮ್ಯ (ಪೇಟೆಂಟ್‌) ಅನ್ನು ಪಡೆದಿರುತ್ತದೆ. ಔಷಧದ ಅಭಿವೃದ್ಧಿ, ಸಂಶೋಧನೆಯ ವೆಚ್ಚವನ್ನು ಸರಿದೂಗಿಸಲು, ಕಂಪನಿ ತನ್ನದೇ ಆದ ಬ್ರ್ಯಾಂಡ್‌ ಹೆಸರಿನಡಿ, ಮತ್ತು ಬೆಲೆಯನ್ನು ನಿಗದಿ ಪಡಿಸಿ ಮಾರಾಟ ಮಾಡುತ್ತದೆ.
  • ಪೇಟೆಂಟ್‌ ಅವಧಿ ಮುಗಿದ ಬಳಿಕ ಇತರ ಔಷಧಿ ತಯಾರಿಕೆದಾರರೂ, ಆ ಔಷಧವನ್ನು ತಯಾರಿಸಬಹುದಾಗಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಔಷಧವನ್ನು ಪದೇ ಪದೇ ಪರೀಕ್ಷೆಗೊಳಪಡಿಸುವುದು, ಹೆಚ್ಚಿನ ಸಂಶೋಧನೆ ಇತ್ಯಾದಿಗಳನ್ನು ನಡೆಸಬೇಕೆಂದಿರುವುದಿಲ್ಲ.
  • ಸಾಮಾನ್ಯ ಔಷಧ ಹೆಸರಲ್ಲಿ ಇದನ್ನು ತಯಾರಿಸುತ್ತಾರೆ. ಆದ್ದರಿಂದ ಇದರ ಬೆಲೆ ಕಡಿಮೆ ಇರುತ್ತದೆ. ಒಂದು ಉತ್ಪನ್ನದ ಜೆನೆರಿಕ್‌ ಆವೃತ್ತಿ ಬಂದರೂ, ಬ್ರ್ಯಾಂಡೆಡ್‌ ಔಷಧಿಗೂ ಅದಕ್ಕೂ ಏನೂ ವ್ಯತ್ಯಾಸವಿರುವುದಿಲ್ಲ. ಅದರಲ್ಲಿನ ಔಷಧೀಯ ಅಂಶಗಳು ಒಂದೇ ರೀತಿ ಇರುತ್ತದೆ. ಆದರೆ ಬ್ರ್ಯಾಂಡೆಡ್‌ ಔಷಧಗಳಲ್ಲಿ ಬಣ್ಣಗಳು, ಆಕಾರ ಇತ್ಯಾದಿಗಳು ಬದಲಾಗಬಹುದಷ್ಟೇ. ಒಂದು ಪೇಟೆಂಟ್‌ ಅವಧಿ 20 ವರ್ಷಗಳು ಇರುತ್ತವೆ. ಅದರ ಬಳಿಕ ವಿವಿಧ ಔಷಧ ಕಂಪನಿಗಳು ನಿರ್ದಿಷ್ಟ ಔಷಧವನ್ನು ತಯಾರುಮಾಡಬಹುದಾಗಿದೆ.

 

ಬೆಲೆ ಎಷ್ಟು ಕಡಿಮೆ?

  • ಅಮೆರಿಕದಲ್ಲಿ ಜೆನೆರಿಕ್‌ ಔಷಧಗಳ ಬೆಲೆ ಬ್ರ್ಯಾಂಡೆಡ್‌ ಔಷಧಗಳಿಗಿಂತ ಸಾಮಾನ್ಯವಾಗಿ ಶೇ.80ರಿಂದ ಶೇ.85ರಷ್ಟು ಕಡಿಮೆ ಇರುತ್ತದೆ. ಭಾರತದಲ್ಲಿ ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಪಟ್ಟಿ (ಎನ್‌ಎಲ್‌ಇಎಮ್‌) ಮತ್ತು ದರ ನಿಯಂತ್ರಣ ಆದೇಶ 2013ರ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ.
  • ಭಾರತದ ಮಟ್ಟಿಗೆ ಬ್ರ್ಯಾಂಡೆಡ್‌ ಔಷಧಗಳಾದರೂ ದರ ನಿಯಂತ್ರಣ ಪ್ರಾಧಿಕಾರ ಸೂಚಿಸಿದಷ್ಟೇ ಪ್ರಮಾಣದಲ್ಲಿ ಔಷಧ ಬೆಲೆಯನ್ನು ನಿಗದಿ ಮಾಡಬೇಕಿರುತ್ತದೆ. ಒಂದು ವೇಳೆ ಪಟ್ಟಿಯಲ್ಲಿ ಇಲ್ಲದ ಔಷಧಗಳಾದರೆ, ಕಂಪನಿಗಳು ಅವುಗಳ ದರಗಳನ್ನು ನಿಗದಿ ಪಡಿಸಲು ಸ್ವತಂತ್ರವಾಗಿರುತ್ತವೆ. ಆದರೂ, ಒಂದು ವರ್ಷದಲ್ಲಿ ಔಷಧವೊಂದರ ಗರಿಷ್ಠ ಬೆಲೆಯನ್ನು ಶೇ.10ಕ್ಕಿಂತ ಮೇಲೆ ಏರಿಸುವಂತೆ ಇರುವುದಿಲ್ಲ. ಸದ್ಯ ದೇಶದಲ್ಲಿ ಸಾಮಾನ್ಯ ಅಲರ್ಜಿ ಔಷಧ (10 ಮಾತ್ರೆಯುಳ್ಳ ಒಂದು ಸ್ಟ್ರಿಪ್‌) ಬೆಲೆ 35 ರೂ. ಇದ್ದರೆ, ಜೆನೆರಿಕ್‌ ಔಷಧ ಬೆಲೆ 25 ರೂ. ಇರುತ್ತದೆ.

 

ಇವು ಸುರಕ್ಷಿತವೇ?

  • ಜೆನೆರಿಕ್‌ ಔಷಧಗಳು ಸಂಪೂರ್ಣ ಸುರಕ್ಷಿತ. ಸಾಮಾನ್ಯ ಬ್ರಾಂಡೆಡ್‌ ಔಷಧಗಳಂತೆಯೇ ಇದೂ ಇರುತ್ತದೆ. ಔಷಧದ ಮೂಲದ್ರವ್ಯ, ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಜೊತೆಗೆ ಬ್ರಾಂಡೆಡ್‌ ಔಷಧಕ್ಕಿಂತ ಬೆಲೆಯೂ ಕಡಿಮೆ.
  • ಜೆನೆರಿಕ್‌ ಔಷಧಗಳನ್ನು ಜನರು ನಿರಾತಂಕವಾಗಿ ಪಡೆಯಬಹುದು. ಇದರಿಂದ ದುಬಾರಿ ದರ ನೀಡಿ ಔಷಧವನ್ನು ಕೊಳ್ಳುವುದು ತಪ್ಪುತ್ತದೆ. ಇದೀಗ ಆಯ್ದ ಆಸ್ಪತ್ರೆಗಳಲ್ಲಿ ಜೆನೆರಿಕ್‌ ಮಳಿಗೆಗಳು ಕಾರ್ಯಾರಂಭಗೊಂಡಿದ್ದು, ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

 

 ಇದಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳೇನು  ?

  • ಜೆನೆರಿಕ್‌ ಔಷಧ ಕುರಿತಂತೆ ಪ್ರತ್ಯೇಕ ಕಾನೂನು ಚೌಕಟ್ಟನ್ನು ಹೊಂದುವುದು ಕೇಂದ್ರದ ಪ್ಲಾನ್‌. ಜೆನೆರಿಕ್‌ ಔಷಧಗಳ ಗುಣಮಟ್ಟ, ಪ್ರಯೋಗಾತ್ಮಕತೆಗಳನ್ನು ಕಾಪಾಡಿಕೊಳ್ಳಲು ಇದು ಶ್ರಮಿಸಲಿದೆ.
  • ಭಾರತದಲ್ಲಿ ಮಾರಾಟವಾಗುವ ಶೇ.1ರಷ್ಟು ಜೆನೆರಿಕ್‌ ಔಷಧಗಳು ಮಾತ್ರ ಗುಣಮಟ್ಟ ಪರೀಕ್ಷೆಗೆ ಒಳಪಡುತ್ತವೆ. ಆದ್ದರಿಂದ ಸಾರ್ವತ್ರಿಕವಾಗಿ ಜೆನೆರಿಕ್‌ ಔಷಧಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲು ಕಾನೂನು ನೆರವಾಗಲದೆ. ಜೊತೆಗೆ ಡ್ರಗ್‌ ಇನ್ಸೆಪೆಕ್ಟರ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲುಉದ್ದೇಶಿಲಾಗಿದೆ.
  • ಇದರೊಂದಿಗೆ ವೈದ್ಯರು ರೋಗಿಗಳಿಗೆ ಜೆನೆರಿಕ್‌ ಔಷಧಗಳನ್ನೇ ಕೊಡುವಂತೆ ಹೇಳಲು ನಿರ್ಧರಿಸಿದೆ. ಬಡ, ಸಾಮಾನ್ಯ ರೋಗಿಗಳಿಗೆ ನೆರವಾಗಲು ಮೆಡಿಕಲ್‌ಗ‌ಳಲ್ಲಿಯೂ ಜೆನೆರಿಕ್‌ ಔಷಧ ನೀಡುವಂತೆ ಉತ್ತೇಜನ ನೀಡಲು ಕೇಂದ್ರ ಕ್ರಮಕೈಗೊಳ್ಳಲಿದೆ.

 

 

ಜೆನೆರಿಕ್‌ ಔಷಧಿಗಳ ಗುಣಮಟ್ಟವೇನು?

  • ಯಾವುದೇ ವಸ್ತುವೊಂದು ಅತಿ ಅಗ್ಗದ ಬೆಲೆಗೆ ದೊರಕುವಾಗ ಅದು ಕಳಪೆ ಗುಣಮಟ್ಟದ್ದು ಎಂಬ ಭಾವನೆ ಜನಸಾಮಾನ್ಯರಿಗಿದೆ. ಆದರೆ ಜೆನೆರಿಕ್‌ ಔಷಧಿಗಳು ಹಾಗಲ್ಲ. ಜೆನೆರಿಕ್‌ ಮತ್ತು ಬ್ರಾಂಡೆಡ್‌ ಔಷಧಿಗಳ ಸತ್ವ ಸಮಾನವಾದುದು. ಅದರ ವೈದ್ಯಶಾಸ್ತ್ರೀಯ ಮೌಲ್ಯಗಳೂ ಸಮವಾಗಿವೆ. ಬಣ್ಣದ ಅಂಶಗಳು, ತುಂಬಲು ಬಳಸುವ ಸಾಧನಗಳು, ರುಚಿ ಇತ್ಯಾದಿಗಳು ಭಿನ್ನವಾಗಿದ್ದರೂ ಅದರ ವೈದ್ಯಶಾಸ್ತ್ರೀಯ ಮೌಲ್ಯಕ್ಕೆ ಹಾನಿಯಿಲ್ಲ.
  • ಜನೌಷಧಿ ಮಳಿಗೆಗಳಲ್ಲಿ ದೊರಕುವ ಮೊದಲು ಔಷಧಿಗಳು ಅದರ ಪರಿಣಾಮ, ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ, ನ್ಯಾಷನಲ್‌ ಎಕ್ರಿಡಿಟೇಶನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಆಂಡ್‌ ಕ್ಯಾಲಿಬ್ರೇಶನ್‌ ಲಾಬ್‌ನಲ್ಲಿ ವ್ಯಾಪಕ, ಕಠಿಣ ಪರೀಕ್ಷೆಗೆ ಒಳಪಡುತ್ತವೆ. ಬಳಿಕ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತದೆ.
  • ಬಿಪಿಪಿಐ(ಬ್ಯುರೋ ಆಫ್ ಫಾರ್ಮಾ ಪಿಎಸ್‌ಯು ಆಫ್ ಇಂಡಿಯಾ)ಯು ಈ ಯೋಜನೆಯನ್ನು ಮಾನಿಟರ್‌ ಮಾಡಲು ಸ್ಥಾಪಿಸಲ್ಪಟ್ಟಿದೆ. ರಾಜ್ಯ ಸರಕಾರದ ಪಾಲುದಾರಿಕೆಯೊಂದಿಗೆ ಬಿಪಿಪಿಐ ಜನೌಷಧಿ ಮಳಿಗೆಗಳನ್ನು ತೆರೆಯುವುದು, ಮಾನಿಟರ್‌ ಮಾಡುವುದು, ಜೆನೆರಿಕ್‌ ಔಷಧಿಗಳ ಬೆಲೆಯನ್ನು ನಿಗದಿಗೊಳಿಸುವುದು, ವಿತರಣೆಯನ್ನು ಖಾತರಿಪಡಿಸುತ್ತದೆ. ಜನೌಷಧಿ ಮಳಿಗೆಗಳನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವುದು ಬಿಪಿಪಿಐಯ ಮುಖ್ಯ ಉದ್ದೇಶ.
  • ರಾಜ್ಯ ಸರಕಾರಗಳು ಸರಕಾರೀ ಆಸ್ಪತ್ರೆಗಳ ಸಮೀಪ ಸೂಕ್ತ ಜಾಗವನ್ನು ಒದಗಿಸಬೇಕು. ಅಂಚೆ ಕಚೇರಿ, ರೈಲ್ವೇ ಸ್ಟೇಷನ್‌, ಪಂಚಾಯತ್‌ ಕಚೇರಿ, ಬಸ್‌ಸ್ಟಾಂಡ್‌, ರಕ್ಷಣಾ ಪ್ರದೇಶಗಳಲ್ಲೂ ಜಾಗವನ್ನು ಒದಗಿಸಬೇಕು. ಜನೌಷಧಿ ಮಳಿಗೆಗಳನ್ನು ತೆರೆಯುವ ಪ್ರಕ್ರಿಯೆ ಬಹಳ ಸರಳವಾಗಿದೆ. ಯೋಗ್ಯತೆಯುಳ್ಳ ಸಾಮಾನ್ಯ ವ್ಯಕ್ತಿ, ಸರಕಾರೇತರ ಸಂಸ್ಥೆ ಅಥವಾ ಟ್ರಸ್ಟ್‌ ಮಳಿಗೆಗಗಳನ್ನು ತೆರೆಯಬಹುದು.

 

ಪ್ರಸ್ತುತ ಯಾವ ರೀತಿಯಲ್ಲಿದೆ ?

 

  • 1,00,000 ಕೋಟಿ ರೂ.ಗಳಿಗಿಂತ ಹೆಚ್ಚಿರುವ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಶೇ.90ರಷ್ಟು ಔಷಧಿಗಳು ಅವುಗಳ ಬ್ರಾಂಡ್ ಹೆಸರಿನಲ್ಲೇ ಮಾರಾಟವಾಗುತ್ತವೆ. ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಔಷಧಿಗಳನ್ನು ವಿವರಿಸುವಷ್ಟು ಮತ್ತು ಸೂಕ್ತವಾದಷ್ಟು ಜೆನರಿಕ್ ಹೆಸರುಗಳೇ ಲಭ್ಯವಿಲ್ಲ. ಅವುಗಳಲ್ಲಿ ಅರ್ಧದಷ್ಟು -50,000 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು- ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಫಿಕ್ಸೆಡ್ ಡೋಸ್ ಕಾಂಬಿನೇಷನ್- ಎಫ್‌ಡಿಸಿ- ಎರಡು ಅಥವಾ ಮೂರು ಔಷಧಿ ವಸ್ತುಗಳನ್ನು ನಿಗದಿತ ಪ್ರಮಾಣದಲ್ಲಿ ಸಂಯೋಜಿಸಿ ಸಿದ್ಧಪಡಿಸುವ ಔಷಧ- ಅನುವಾದಕನ ಟಿಪ್ಪಣಿ) ಔಷಧಿಗಳಾಗಿವೆ. ಹಲವಾರು ಎಫ್‌ಡಿಸಿಗಳು ಎಂಟು ಅಥವಾ ಒಂಬತ್ತು ಔಷಧಿಗಳ ಸಂಯೋಜನೆಗಳಾಗಿರುತ್ತವೆ.
  • ಮಾರುಕಟ್ಟೆಯಲ್ಲಿ ಸಾವಿರಾರು ಎಫ್‌ಡಿಸಿ ಬ್ರಾಂಡುಗಳಿರುತ್ತವೆ. ಹೀಗಾಗಿ ಪ್ರತಿಯೊಂದು ಎಫ್‌ಡಿಸಿ ಔಷಧಿಯ ಜೆನೆರಿಕ್ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಬರೆಯುವುದು ಕಾರ್ಯಸಾಧುವಲ್ಲದ ಸಂಗತಿಯಾಗಿದೆ. ಒಂದು ವೇಳೆ ವೈದ್ಯರು ಒಂದೇ ಔಷಧ ವಸ್ತು ಇರುವ ಔಷಧಿಗಳ ಜೆನೆರಿಕ್ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಬರೆದುಕೊಟ್ಟರೂ ಔಷಧಿ ವ್ಯಾಪಾರಿ ಆ ಜೆನೆರಿಕ್ ಔಷಧವನ್ನು ಹೊಂದಿರುವ ಯಾವ ಬ್ರಾಂಡಿನ ಮಾರಾಟದಿಂದ ತನಗೆ ಹೆಚ್ಚು ಕಮಿಷನ್ ಸಿಗುವುದೋ ಆ ಔಷಧವನ್ನಷ್ಟೇ ಮಾರುತ್ತಾರೆ ಮತ್ತು ಅದೇ ಜೆನೆರಿಕ್ ಔಷಧ ವಸ್ತು ಹೊಂದಿದ್ದರೂ ತನಗೆ ಹೆಚ್ಚು ಕಮಿಷನ್ ಸಿಗದ ಬ್ರಾಂಡಿನ ಔಷಧಿಯ ದಾಸ್ತಾನನ್ನೇ ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಕಡಿಮೆ ಬೆಲೆಗೆ ಔಷಧವನ್ನು ಜನರಿಗೆ ತಲುಪಿಸಬೇಕೆಂಬ ಮೂಲ ಉದ್ದೇಶವೇ ವಿಫಲಗೊಂಡಂತಾಗುತ್ತದೆ. ಅಷ್ಟು ಮಾತ್ರವಲ್ಲ. ಇದರಿಂದಾಗಿ ನಮ್ಮ ಗಮನವು ಮಾರುಕಟ್ಟೆಯ ಸಲುವಾಗಿ ಔಷಧಿ ಉತ್ಪಾದಕ ಕಂಪೆನಿಗಳು ಅನುಸರಿಸುವ ಅನೈತಿಕ ಮಾರುಕಟ್ಟೆ ಮಾರ್ಗಗಳಿಂದ ಔಷಧಿ ಅಂಗಡಿಯವರು ಅನುಸರಿಸುವ ಅನೈತಿಕ ಮಾರ್ಗಗಳ ಕಡೆ ಹರಿಯುತ್ತದೆ. ಇದರಿಂದ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ ಮತ್ತು ಔಷಧಿ ಉದ್ಯಮವು ಸಹ ಯಥಾರೀತಿ ಮುಂದುವರಿಯುತ್ತದೆ. ವೈದ್ಯಕೀಯ ಚಿಕಿತ್ಸೆಯ ಒಟ್ಟಾರೆ ವೆಚ್ಚದಲ್ಲಿ ಔಷಧಿಗಳ ಮೇಲಿನ ವೆಚ್ಚವೇ ಶೇ.50- 80 ರಷಾ್ಟಗುವುದೂ ಮುಂದುವರಿಯುತ್ತದೆ.

 

  • ಇದಲ್ಲದೆ ಭಾರತ ಸರಕಾರವು ಜನೌಷಧಿ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ ಇಂಥಾ ಜೆನೆರಿಕ್ ಔಷಧಿ ಅಂಗಡಿಗಳು ಹೆಚ್ಚಿಲ್ಲ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಔಷಧಿ ಮಾರಾಟ ಅಂಗಡಿಗಳಿದ್ದರೆ ಹೆಚ್ಚೆಂದರೆ 3,000ದಷ್ಟು ಮಾತ್ರ ಜನೌಷಧಿ ಮಳಿಗೆಗಳಿವೆ. ಗ್ರಾಮೀಣ ಪ್ರೇಶದಲ್ಲಂತೂ ಇದು ಇನ್ನೂ ಕಡಿಮೆ.

 

  • ಜನೌಷಧಿಗಳ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್- ಡಿಟಿಎಬಿ (ಔಷಧಗಳ ತಾಂತ್ರಿಕ ಸಲಹಾ ಸಮಿತಿ) 2016ರ ಮೇ ತಿಂಗಳಲ್ಲಿ ಸಭೆ ಸೇರಿ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆಕ್ಟ್ -1940 (ಔಷಧಿ ಮತ್ತು ಸೌಂದರ್ಯ ವರ್ಧಕಗಳ ಕಾಯ್ದೆ)ನ 65 (11 ಎ) ವಿಧಿನಿಯಮಕ್ಕೆ ಒಂದು ತಿದ್ದುಪಡಿ ತರಲು ಯೋಚಿಸಿತ್ತು. ಆ ಪ್ರಸ್ತಾವಿತ ತಿದ್ದುಪಡಿಯು ವೈದ್ಯರು ಸೂಚಿಸುವ ಔಷಧಿಗಳ ಜೆನೆರಿಕ್ ಹೆಸರನ್ನು ಮತ್ತು ಸೂಚಿಸಲಾದ ಬ್ರಾಂಡ್ ಹೆಸರಿಗೆ ಪರ್ಯಾಯವಾದ ಇತರ ಬ್ರಾಂಡುಗಳ ಹೆಸರನ್ನು ಔಷಧಿ ಅಂಗಡಿಗಳಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯ ಮಾಡುತ್ತಿತ್ತು. ಆದರೆ ಒಂದು ಜೆನೆರಿಕ್ ಔಷಧಿಯ ಜೈವಿಕ ಲಭ್ಯತೆಯು (ಬಯೋ ಅವೈಲಬಿಲಿಟಿ) ಸೂಚಿಸಲಾದ ಬ್ರಾಂಡಿನ ಔಷಧಿ ಯಷ್ಟು ಉತ್ತಮವಾಗಿರಲಾರದು ಎಂಬ ಕಾರಣವನ್ನು ಮುಂದೊಡ್ಡಿ ಡಿಟಿಎಬಿ ಈ ಸಲಹೆಯನ್ನು ತಿರಸ್ಕರಿಸಿತು. (ಬಯೋಅವೈಲಬಿಲಿಟಿ -ಜೈವಿಕಲಭ್ಯತೆ- ಎನ್ನುವುದು ದೇಹದ ಪರಿಚಲನೆಯ ವ್ಯವಸ್ಥೆಯಲ್ಲಿ ಬೆರೆತುಹೋಗಿ ತಾನು ಪರಿಣಾಮ ಬೀರಬೇಕಾದ ಗಮ್ಯ ಸ್ಥಳದಲ್ಲಿ ಲಭ್ಯವಾಗುತ್ತಾ ಚಿಕಿತ್ಸಿಕವಾಗಿ ಕ್ರಿಯಾಶೀಲವಾಗಿರಬೇಕಾದ ಔಷಧಿಯ ಪ್ರಮಾಣವೆಷ್ಟೆಂಬ ಅಳತೆೆಯಾಗಿದೆ.

 

  • ಬಯೋಈಕ್ವಲೆನ್ಸ್ – ಜೈವಿಕ ಸಮಪ್ರಮಾಣ- ಎಂದರೆ ಎರಡು ವಿವಿಧ ಔಷಧಿಗಳ, ಉದಾಹರಣೆಗೆ ಒಂದು ಜೆನೆರಿಕ್ ಔಷಧಿ ಮತ್ತು ಬ್ರಾಂಡ್ ಔಷಧಿಗಳ, ಬಯೋಅವೈಲಬಿಲಿಟಿ-ಜೈವಿಕ ಲಭ್ಯತೆಯ ಹೋಲಿಕೆಯ ಪ್ರಮಾಣ). ಇದರ ಅರ್ಥವೇನೆಂದರೆ ಔಷಧಿ ಸಂಬಂಧೀ ವ್ಯವಹಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸರಕಾರದ ಒಂದು ಅತ್ಯುನ್ನತ ಸಮಿತಿಗೆ ತನ್ನದೇ ಸರಕಾರದ ಉದ್ಯಮಗಳಲ್ಲಿ ಉತ್ಪಾದನೆಯಾಗುವ ಔಷಧಿಗಳ ಬಗ್ಗೆ ವಿಶ್ವಾಸವಿಲ್ಲ. ಆದರೆ ಈ ಡಿಟಿಎಬಿಯು ಕೆಲವು ವರ್ಗದ ಔಷಧಿಗಳಿಗೆ ಅವುಗಳ ಒಳಹೊಕ್ಕುವ (ಪರ್ಮೀಯಬಿಲಿಟಿ) ಮತ್ತು ಕರಗುವ (ಸಾಲ್ಯುಬಿಲಿಟಿ) ಸಾಮರ್ಥ್ಯಗಳನ್ನು ಆಧರಿಸಿ ಜೈವಿಕಲಭ್ಯತೆ ಮತ್ತು ಜೈವಿಕ ಸಮಪ್ರಮಾಣತೆಯಿಂದ ವಿನಾಯಿತಿಯನ್ನು ನೀಡಬಹುದಿತ್ತು. ಆರೋಗ್ಯ ಸೇವೆಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಹಲವಾರು ದೇಶಗಳಲ್ಲಿ ಇದೇ ಮಾರ್ಗವನ್ನು ಅನುಸರಿಸಲಾಗುತ್ತಿದೆ. ಈ ಜೈವಿಕಲಭ್ಯತೆ ಮತ್ತು ಸಮಪ್ರಮಾಣತೆಯ ಪರೀಕ್ಷೆಗಳು ಅತ್ಯಗತ್ಯವಾಗುವುದು ನಿರ್ಣಾಯಕ ಪ್ರಮಾಣವುಳ್ಳ ಔಷಧಿಗಳಿಗೆ ಮತ್ತು ತುಂಬಾ ಸೀಮಿತ ಚಿಕಿತ್ಸಕ ವ್ಯಾಪ್ತಿಯನ್ನು (ಥೆರಾಪಟಿಕ್ ರೇಂಜ್) ಹೊಂದಿರುವಂತಹ ಔಷಧಿಗಳಿಗೆ ಮಾತ್ರ. ಅವುಗಳ ಸಂಖ್ಯೆ ಬಹಳ ಕಡಿಮೆ.

 

  • ಆದರೆ ಡಿಟಿಎಬಿಗೆ ಜೆನೆರಿಕ್ ಔಷಧಿಗಳಿಗೆ ಇರಬೇಕಾದಷ್ಟು ಜೈವಿಕಲಭ್ಯತೆ ಮತ್ತು ಸಮಪ್ರಮಾಣತೆ ಇರುತ್ತದೆಂಬ ಬಗ್ಗೆಯೇ ಮೂಲಭೂತ ಸಂದೇಹವಿದ್ದಂತಿದೆ. ಪ್ರಾಯಶಃ ಡಿಟಿಎಬಿಗೆ ಭಾರತದ ಔಷಧೀಯ ನಿಯಂತ್ರಣಾ ಸಂಸ್ಥೆಗಳು ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಹೇರಬಲ್ಲವೆಂಬ ಬಗ್ಗೆಯೇ ವಿಶ್ವಾಸವಿದ್ದಂತಿಲ್ಲ.

 

  • ತಮಿಳುನಾಡು ಮತ್ತು ರಾಜಸ್ಥಾನದ ಸರಕಾರಗಳು ಪ್ರತಿವರ್ಷವೂ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಜೆನರಿಕ್ ಔಷಧಿ ಗಳನ್ನು ಪಡೆದುಕೊಳ್ಳುತ್ತವೆ. ಆ ರಾಜ್ಯಗಳಲ್ಲಿ ಉತ್ತಮವಾದ ಗುಣಮಟ್ಟ ನಿಯಂತ್ರಣಾ ವ್ಯವಸ್ಥೆ ಇರುವುದರಿಂದ ಆ ರಾಜ್ಯಗಳ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಕೋಟ್ಯಂತರ ಜೆನೆರಿಕ್ ಔಷಧಿಗಳು ಬಳಕೆಯಲ್ಲಿವೆ. ಈ ಎರಡು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಈ ಯಶಸ್ವೀ ಔಷಧಿ ಪೂರಣ ವ್ಯವಸ್ಥೆಯೇ ಜೆನೆರಿಕ್ ಔಷಧಿಗಳು ಎಂದಿಗೂ ಉತ್ತಮ ಪರ್ಯಾಯವಾಗಲಾರದೆಂಬ ಆತ್ಮಘಾತುಕ ವಾದಗಳನ್ನು ಸುಳ್ಳೆಂದು ಸಾಬೀತುಪಡಿಸುತ್ತದೆ. ಈ ಸತ್ಯವು ದೇಶಾದ್ಯಂತ ಉತ್ತಮ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವುದರಲ್ಲಿ ಇರುವ ಅಗಾಧ ಸಮಸ್ಯೆಗಳನ್ನೇನೂ ನಿರಾಕರಿಸುವುದಿಲ್ಲ. ಆದರೆ ವಿಷಾದದ ಸಂಗತಿಯೆಂದರೆ, ಬ್ರಾಂಡ್ ಔಷಧಿಗಳಿಗೆ ಹೋಲಿಸಿದರೆ ಜೆನೆರಿಕ್ ಔಷಧಿಗಳಲ್ಲಿ ಸಾಮಾನ್ಯವಾಗಿ ಜೈವಿಕಲಭ್ಯತೆಯ (ಬಯೋ ಅವೈಲಬಿಲಿಟಿ) ಕೊರತೆಯಿರುತ್ತದೆಂದು ಔಷಧ ಕ್ಷೇತ್ರದ ಉದ್ಯಮಿಗಳು ಮಾಡುತ್ತಿರುವ ಅಪಪ್ರಚಾರವನ್ನು ಯಥಾವತ್ತಾಗಿ ಸ್ವೀಕರಿಸುತ್ತಿರುವ ವೈದ್ಯಕೀಯ ವೃತ್ತಿಯಲ್ಲಿನ ಟೀಕಾಕಾರರು ಬಡ ರೋಗಿಗಳಿಗಂತೂ ದೊಡ್ಡ ಅನ್ಯಾಯವನ್ನೇ ಮಾಡುತ್ತಿದ್ದಾರೆ.

 

  • ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ-ಎಂಸಿಐ (ಭಾರತೀಯ ವೈದ್ಯಕೀಯ ಪರಿಷತ್ತು) 2016ರ ಅಕ್ಟೊಬರ್‌ನಲ್ಲಿ ವೈದ್ಯರ ನೀತಿ ಸಂಹಿತೆಯಲ್ಲಿ ಒಂದು ತಿದ್ದುಪಡಿಯನ್ನು ತಂದಿದೆ. ಅದರ ಪ್ರಕಾರ ಪ್ರತೀ ವೈದ್ಯರು ಔಷಧಿಯನ್ನು ಸೂಚಿಸುವಾಗ ಅವುಗಳ ಜೆನೆರಿಕ್ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕು ಮತ್ತು ಔಷಧಿಗಳ ಬಳಕೆ ಮತ್ತು ಸೂಚನೆಗಳು ತರ್ಕಬದ್ಧವಾಗಿದೆಯೆಂಬುದನ್ನು ಆಕೆ/ಆತ ಖಾತರಿಪಡಿಸಿಕೊಳ್ಳಬೇಕು. ಆದರೆ ಈ ತರ್ಕಬದ್ಧತೆಯನ್ನು ಅಳತೆ ಮಾಡಲು ಅಗತ್ಯವಿರುವ ಒಂದು ಚೌಕಟ್ಟೇ ಇಲ್ಲದಿರುವಾಗ ಔಷಧಿಗಳ ತರ್ಕಬದ್ಧ ಸೂಚನೆ ಮತ್ತು ಬಳಕೆಯನ್ನು ಎಂಸಿಐ ಹೇಗೆ ನಿಯಂತ್ರಿಸುತ್ತೆಂಬುದು ಯಾರ ಊಹೆಗೂ ನಿಲುಕುತ್ತಿಲ್ಲ.

 

  • ಔಷಧಿಗಳ ತರ್ಕಬದ್ಧ ಸೂಚನೆ ಮತ್ತು ಬಳಕೆಗಳು ವೈದ್ಯ, ಔಷಧ ಮಾರಾಟಗಾರ, ನಿಯಂತ್ರಕ ಮತ್ತು ಬಳಕೆದಾರನ ಮೇಲೆ ಅವಲಂಬಿಸಿರುತ್ತದೆ. ಔಷಧಿಗಳ ತರ್ಕಬದ್ಧ ಬಳಕೆಗೆ ಇರುವ ಕೆಲವು ಕನಿಷ್ಠ ಅಗತ್ಯಗಳೆಂದರೆ: ಶೆಡ್ಯೂಲ್ ಜಿ, ಎಚ್, ಎಚ್1 ಮತ್ತು ಎಕ್ಸ್ ಔಷಧಿಗಳು ಅಂಗಡಿ ಮುಂಗಟ್ಟೆಗಳ ಮೇಲೆ ಸುಲಭ ವಾಗಿ ಲಭ್ಯವಿರಬಾರದು ಮತ್ತು ವೈದ್ಯರ ಸಲಹೆ ಇಲ್ಲದೆ ಕೊಡಲೂ ಬಾರದು; ವೈದ್ಯರು ಮತ್ತು ಅವರ ವೃತ್ತಿಪರ ಸಂಸ್ಥೆಗಳು ಹಾಗೂ ನಿಯಂತ್ರಕರು ಆ್ಯಂಟಿಬಯೋಟಿಕ್ಸ್ ಮತ್ತು ಕೆಲವು ಕೀಲಕ ಔಷಧಿಗಳ ದುರ್ಬಳಕೆಯಾಗದಂತೆ ನಿಗಾವಹಿಸಬೇಕು; ಮತ್ತು ಎಲ್ಲಾ ತರ್ಕರಹಿತ/ಹಾನಿಕಾರಕ /ನಿಷ್ಪ್ರಯೋಜಕ ಎಫ್‌ಡಿಸಿ ಮತ್ತು ಅವೈಜ್ಞಾನಿಕ ಏಕ ಔಷಧಯುಕ್ತ ಔಷಧಿಗಳು ಚಲಾವಣೆಯಾಗದಂತೆ ಖಾತರಿಪಡಿಸಿಕೊಳ್ಳಬೇಕು. ಔಷಧಿಗಳ ತರ್ಕಬದ್ಧ ಸೂಚನೆ ಮತ್ತು ಬಳಕೆಗೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಮತ್ತು ವೈದ್ಯರು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪೇಟೆಂಟ್ (ಬೌದ್ಧಿಕ ಆಸ್ತಿ ಹಕ್ಕು)ನಿಂದ ಮುಕ್ತವಾದ ಔಷಧಿಗಳ ಬ್ರಾಂಡಿಂಗ್ ಅನ್ನು ಪ್ರೋತ್ಸಾಹಿಸಬಾರದು. ಹಲವು ದೇಶಗಳು ಈ ನೀತಿಯನ್ನು ಈಗಾಗಲೇ ಚಾಲ್ತಿಯಲ್ಲಿಟ್ಟಿವೆ. 1975ರ ಹಾಥಿ ಸಮಿತಿ ವರದಿಯೂ ಸಹ ಬ್ರಾಂಡಿಂಗ್‌ನ ವಿರುದ್ಧ ಶಿಫಾರಸು ಮಾಡಿತ್ತು. 2003ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದಂತೆ ಜೀವ ರಕ್ಷಕ ಔಷಧಿಗಳ ಪಟ್ಟಿಯನ್ನು ವಿಸ್ತರಿಸುವುದು ಮತ್ತು ಅವುಗಳ ಬೆಲೆಯನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ.

 

  • ಪ್ರಸ್ತುತ ಜಾರಿಯಲ್ಲಿರುವ 2013ರ ಮಾರುಕಟ್ಟೆ ಆಧಾರಿತ ಔಷಧಿ ಬೆಲೆ ನಿಯಂತ್ರಣಾ ಆದೇಶವು (ಡ್ರಗ್ ಪ್ರೈಸ್ ಕಂಟ್ರೋಲ್ ಆರ್ಡರ್- ಡಿಪಿಸಿಒ) ಈ ಉದ್ದೇಶಗಳ ಒಂದು ದೊಡ್ಡ ವಿಡಂಬನೆಯಂತಿದೆೆ. ಏಕೆಂದರೆ ಇದು ಔಷಧ ಕಂಪೆನಿಗಳು ತಮ್ಮ ಔಷಧಿಗಳ ಮೇಲೆ ಶೇ.2,000-3,000 ದಷ್ಟು (ಮತ್ತು ಕೆಲವೊಮ್ಮೆ ಶೇ.10,000ದಷ್ಟು ) ಲಾಭವನ್ನು ಪಡೆದುಕೊಳ್ಳಲು ಅವಕಾಶ ನೀಡುವ ರೀತಿಯಲ್ಲಿ ಅವುಗಳ ಗರಿಷ್ಠ ಬೆಲೆಯ ಮಿತಿಯನ್ನು ನಿಗದಿಗೊಳಿಸಿದೆ. ಇದನ್ನು ಬದಲಿಸಿ ವೆಚ್ಚಾಧಾರಿತವಾಗಿ ಬೆಲೆ ಯನ್ನು ನಿಗದಿ ಮಾಡುವ 1995ರ ಡಿಪಿಸಿಒ ಜಾರಿಗೆ ಬರಬೇಕು.

 

 

ಮುಂದಿನ ಹಾದಿ

ಇವುಗಳಲ್ಲಿ, ಎಲ್ಲಾ ರಾಜ್ಯಗಳಲ್ಲೂ ರಾಜಸ್ಥಾನ ಮತ್ತು ತಮಿಳುನಾಡುಗಳಲ್ಲಿ ಜಾರಿಯಲ್ಲಿರುವ ರೀತಿಯಲ್ಲೇ ಉಚಿತ ಔಷಧಿ ಮಾದರಿಯನ್ನು ಅನುಸರಿಸುವುದಕ್ಕೆ ಮೊಟ್ಟಮೊದಲ ಆದ್ಯತೆ ನೀಡಬೇಕು. ಸರಕಾರವು ಸಾರ್ವಜನಿಕ ಕ್ಷೇತ್ರದ ಔಷಧಿ ಕಾರ್ಖಾನೆಗಳಲ್ಲಿ ಹೂಡಿಕೆಗಳನ್ನು ಹಿಂದೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಬದಲಿಗೆ ಅವಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಬೇಕು ಹಾಗೂ ಮತ್ತಷ್ಟು ಹೊಸಹೊಸರೀತಿಯಲ್ಲಿ ಅದರ ಬಳಕೆಯನ್ನು ಹೆಚ್ಚಿಸುವ ದಾರಿಗಳನ್ನು ಹುಡುಕಬೇಕು.

 

 

CLICK HERE TO JOIN NIALP FOUNDATION COURSE-2019

Share