20th JULY-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

 

ನಿರಾಶ್ರಿತರಿಗೆ  ಆಶ್ರಯದಾತವಾಗುತ್ತಿರುವ  ಭಾರತ ?

 

SOURCE-THE HINDU https://www.thehindu.com/opinion/op-ed/the-imperative-to-offer-refuge/article24203930.ece

 

 

CLICK HERE TO JOIN NIALP FOUNDATION COURSE-2019

 

ಸನ್ನಿವೇಶ

  • ಮ್ಯಾನ್ಮಾರ್‌ನಿಂದ ಓಡಿಬರುತ್ತಿರುವ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಂದಾಗಿ, ಭಾರತದಲ್ಲಿ ನಿರಾಶ್ರಿತರ ಸಮಸ್ಯೆಯ ಪ್ರಶ್ನೆಗಳು ಗರಿಗೆದರಿವೆ. ಈಗಾಗಲೇ ಲಕ್ಷಾಂತರ ನಿರಾಶ್ರಿತರು ಇಲ್ಲಿದ್ದಾರೆ; ಇನ್ನಷ್ಟು ಬಂದರೆ ನಮಗೆ ಹೊರೆ ಮಾತ್ರವಲ್ಲ, ಭದ್ರತೆಗೂ ಆತಂಕ ಎಂಬ ವಾದ ಸರಕಾರದ್ದು.
  • ರೋಹಿಂಗ್ಯಾಗಳು ಈ ಜಗತ್ತಿನ ಅತ್ಯಂತ ಶೋಷಿತ ಜನಾಂಗ. ಅವರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ನೀಡಬೇಕು ಎಂಬುದು ಜಾಗತಿಕ ಸಮುದಾಯದ ವಾದ.

 

ಯಾಕೆ ಭಾರತಕ್ಕೆ ಅತಿ ಹೆಚ್ಚು ವಲಸೆ ಬರುವುದು ?

 

  • ಸಣ್ಣಪುಟ್ಟ ರಾಷ್ಟ್ರಗಳಿಂದ ಸುತ್ತುವರಿದ ವಿಶಾಲ ದೇಶ ಭಾರತ. ಹೀಗಾಗಿ ಅಕ್ಕಪಕ್ಕದ ಯಾವುದೇ ದೇಶದಲ್ಲಿ ಏನೇ ವಿಪ್ಲವ ಉಂಟಾದರೂ ಸಂತ್ರಸ್ತ ಜನತೆ ಮೊದಲು ಧಾವಿಸುವುದು ಇಲ್ಲಿಗೇ. ಹೀಗೆ ಬಂದ ಅನ್ಯ ದೇಶಗಳ ನಿರಾಶ್ರಿತರನ್ನು ಭಾರತ ತೋಳ್ತೆರೆದು ಸ್ವಾಗತಿಸಿದೆ.
  • ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಕಾಲದಿಂದಲೂ ಭಾರತ ‘ನಿರಾಶ್ರಿತಸ್ನೇಹಿ’ಯಾಗಿ ವರ್ತಿಸಿತ್ತು. ಆದರೆ, ಬದಲಾದ ಕಾಲದ ಕುರುಹು ಎಂಬಂತೆ, ಮ್ಯಾನ್ಮಾರ್‌ನ ಸಂತ್ರಸ್ತ ರೋಹಿಂಗ್ಯಾ ಮುಸ್ಲಿಂ ಸಮುದಾಯ ಬಾಗಿಲು ಬಡಿದಾಗ ಭಾರತ ‘ನೋ’ ಎಂದಿದೆ. ಇದರ ಹಿನ್ನೆಲೆಯಲ್ಲಿ ನಾನಾ ಸಾಮಾಜಿಕ, ರಾಜಕೀಯ, ಆರ್ಥಿಕ ಕಾರಣಗಳು ಇವೆ.

 

  • ಈಗ ಎಲ್ಲೆಡೆ ನಿರಾಶ್ರಿತರದ್ದೇ ಸಮಸ್ಯೆ. ಸಿರಿಯಾದಲ್ಲಿ ಐಸಿಸ್‌ ಹಾವಳಿ ಅತ್ಯಧಿಕವಾದಾಗ ಅಲ್ಲಿಂದ ಜನತೆ ಅಕ್ಕಪಕ್ಕದ ದೇಶಗಳತ್ತ ಪಲಾಯನಗೈದರು. ಇವರಿಗೆ ಆಶ್ರಯ ಕೊಡುವ ಬಗ್ಗೆಯೂ ಯುರೋಪ್‌ನಲ್ಲಿ ಹಲವು ಬಗೆಯ ಚರ್ಚೆಗಳಾದವು. ‘ಬ್ರೆಕ್ಸಿಟ್‌’ನಂತಹ ಐತಿಹಾಸಿಕ ಘಟನೆಯಲ್ಲಿಯೂ ಈ ಚರ್ಚೆ ಪ್ರಮುಖ ಪಾತ್ರ ವಹಿಸಿತು.
  • ಇಂದು ಕೋಟ್ಯಂತರ ನಿರಾಶ್ರಿತರು ಜಗತ್ತಿನಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡು ನಾನಾ ಕಡೆ ಬದುಕಿದ್ದಾರೆ. ಭಾರತದಲ್ಲೂ ಬೇರೆಬೇರೆಡೆಗಳಿಂದ ಬಂದ ಲಕ್ಷಾಂತರ ರೆಫ್ಯೂಜಿಗಳಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ಇಂಥವರ ಸಂಖ್ಯೆ ಸುಮಾರು 3 ಲಕ್ಷ.

 

  • ಸುಮಾರು 30 ದೇಶಗಳಿಂದ ಬಂದವರಿಲ್ಲಿದ್ದಾರೆ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್‌, ಪಾಕಿಸ್ತಾನ, ಬಾಂಗ್ಲಾದೇಶ, ಟಿಬೆಟ್‌ಗಳಿಂದ ಬಂದವರಲ್ಲದೆ, ದೂರದ ಅಮೆರಿಕ, ಬ್ರಿಟನ್‌, ಜರ್ಮನಿ, ಆಸ್ಪ್ರೇಲಿಯಾಗಳಿಂದ ಬಂದವರೂ ಇದ್ದಾರೆ. ಕೇಂದ್ರ ಆಂತರಿಕ ವ್ಯವಹಾರಗಳ ರಾಜ್ಯ ಸಚಿವ ಕಿರಣ್‌ ರಿಜಿಜು ಇತ್ತೀಚೆಗೆ ನೀಡಿರುವ ಮಾಹಿತಿಯ ಪ್ರಕಾರ, 2,89,394 ನಿರಾಶ್ರಿತರು ದೇಶದಲ್ಲಿದ್ದಾರೆ. ಇದು ಅಧಿಕೃತವಾಗಿ ವಾಸಿಸುತ್ತಿರುವವರ ಸಂಖ್ಯೆ. ಅನಧಿಕೃತವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳು ಹಾಗೂ ಬಾಂಗ್ಲಾದೇಶೀಯರ ಸಂಖ್ಯೆ ಇದರಲ್ಲಿ ಒಳಗೊಂಡಿಲ್ಲ. ಅಧಿಕೃತ ನಿವಾಸಿಗಳಲ್ಲಿ ಹೆಚ್ಚಿನವರು ಟಿಬೆಟ್‌, ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನದಿಂದ ಬಂದವರು.

 

  • ಭಾರತ ಸ್ವಾತಂತ್ರಗೊಂಡ ಬಳಿಕ, ನಮ್ಮ ಆಸುಪಾಸಿನ ದೇಶಗಳಲ್ಲಿ ಹಲವಾರು ಆಂತರಿಕ ತುಮುಲಕ್ಕೊಳಗಾದವು. ಇದರಿಂದ ಲಕ್ಷಾಂತರ ಮಂದಿ ಗುಳೆಯೆದ್ದು ಭಾರತದೆಡೆಗೆ ಬರುವಂತಾಯ್ತು. ಇದರಲ್ಲಿ ಹೆಚ್ಚಿನ ಸಂಖ್ಯೆ ಶ್ರೀಲಂಕಾ ತಮಿಳರದು. ಅಲ್ಲಿನ ಆಂತರಿಕ ದಂಗೆ ಹಾಗೂ ಶ್ರೀಲಂಕಾ ತಮಿಳರ ಕಗ್ಗೊಲೆಗಳಿಂದ ಪೀಡೆಗೊಳಗಾಗಿ ಇತ್ತ ಬಂದವರು. ಒಂದು ಅಂದಾಜಿನಂತೆ ಇವರ ಸಂಖ್ಯೆ 1,02,467. ಹಾಗೇ ಟಿಬೆಟ್‌ನಿಂದ ಬಂದವರೂ ಇದ್ದಾರೆ. ದಲಾಯಿ ಲಾಮಾ ಅವರನ್ನು ಚೀನಾದ ರೆಡ್‌ ಆರ್ಮಿ ಪದಚ್ಯುತಿಗೊಳಿಸಿದಾಗ, ಲಾಮಾ ಹಾಗೂ ಅವರ ಅನುಯಾಯಿಗಳು ಭಾರತಕ್ಕೆ ದೌಡಾಯಿಸಿದರು. ನೆಹರೂ ಅವರಿಗೆ ಆಶ್ರಯ ನೀಡಿದರು. 60,000 ಟಿಬೆಟಿಗರು ಇಲ್ಲಿದ್ದಾರೆ. ಮುಂದೆ ಈ ಸಮಸ್ಯೆ 1962ರ ಚೀನಾ- ಭಾರತ ಯುದ್ಧದಲ್ಲಿ ಪ್ರಮುಖ ಕಾರಣವಾಗಿ ಪ್ರಸ್ತಾವವಾಯ್ತು. ಹಾಗೇ ಬಾಂಗ್ಲಾದ 1,03,817 ಮಂದಿ ಹಾಗೂ ಪಾಕಿಸ್ತಾನದ 8799 ಮಂದಿ ವಲಸಿಗರು ಇಲ್ಲಿದ್ದಾರೆ. ಅನಧಿಕೃತವಾಗಿ ವಾಸಿಸುತ್ತಿರುವವರಲ್ಲಿ ಬಾಂಗ್ಲಾದೇಶೀಯರ ಸಂಖ್ಯೆಯೇ ಅಧಿಕ.

 

  • ಅಧಿಕೃತ ವಲಸಿಗರೆಲ್ಲರಿಗೂ ಭಾರತದಲ್ಲಿರುವ ಇತರ ವಿದೇಶಿಗರಿಗೆ ಸಿಗುತ್ತಿರುವ ಸ್ಥಾನಮಾನಗಳೇ ಸಿಕ್ಕಿದೆ, ಸಿಗುತ್ತಿದೆ. ಇವರಿಗೆ ನಮ್ಮ ದೇಶ ಯಾವ ಕೊರತೆಯನ್ನೂ ಮಾಡಿಲ್ಲ. ಆದರೆ ಭಾರತೀಯ ಪ್ರಜೆಯ ಸ್ಥಾನಮಾನವನ್ನು ನೀಡಿಲ್ಲ. ”ಸಾಕಷ್ಟು ಸುರಕ್ಷತಾ ಪರಿಶೀಲನೆಗಳ ಬಳಿಕ, ನಿರಾಶ್ರಿತರಿಗೆ ದೀರ್ಘಾವಧಿ ವೀಸಾಗಳನ್ನು ನೀಡಲಾಗುತ್ತಿದೆ. ಇತರ ವಿದೇಶಿಗರಿಗೆ ದೊರೆಯುತ್ತಿರುವಂತೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅನುಮತಿ ನೀಡಲಾಗಿದೆ. ಯಾವುದೇ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ಅವಕಾಶ ನೀಡಲಾಗಿದೆ,” ಎಂದು ಸಚಿವರು ಹೇಳುತ್ತಾರೆ. ನಿರಾಶ್ರಿತರಿಗೆ ಯಾವುದೇ ದೇಶ ಇದಕ್ಕಿಂತ ಹೆಚ್ಚಾಗಿ ಏನನ್ನು ನೀಡಬಹುದು .

 

  • ಸದ್ಯ ಭಾರತ, ಬಾಂಗ್ಲಾ ಹಾಗೂ ಮ್ಯಾನ್ಮಾರ್‌ಗಳಲ್ಲಿ ಎಚ್ಚರಿಕೆಯ ಗಂಟೆಯಾಗಿ ಮೊಳಗಿರುವುದು, ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಭಾರತ ತೆಗೆದುಕೊಂಡಿರುವ ಕಠಿಣ ನಿರ್ಧಾರ. ಹಿಂಸೆಗೆ ಹೆದರಿ ಇತ್ತ ಬರುತ್ತಿರುವ ರೋಹಿಂಗ್ಯಾಗಳಿಗೆ ನಮ್ಮಲ್ಲಿ ತಾಣವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ ಭಾರತ. ಇಷ್ಟಕ್ಕೆ ನಿಲ್ಲದೇ, ಇನ್ನೂ ಮುಂದೆ ಹೋಗಿ, ಈಗಾಗಲೇ ಇಲ್ಲಿರುವ ಅನಧಿಕೃತ ರೋಹಿಂಗ್ಯಾ ವಲಸಿಗರನ್ನು ಗಡೀಪಾರು ಮಾಡಲಾಗುವುದು ಎಂದೂ ಹೇಳಿದೆ. ಭಾರತದಲ್ಲಿರುವ ಸುಮಾರು 40,000 ರೋಹಿಂಗ್ಯಾಗಳು ಇದರಿಂದ ಬೆಚ್ಚಿಬಿದ್ದಿದ್ದಾರೆ. ಇದನ್ನೇ ಅನುಸರಿಸಿ ”ಈಗಾಗಲೇ ಇಲ್ಲಿರುವ ನಿರಾಶ್ರಿತರನ್ನು ಹೊರಹಾಕುವಂತಿಲ್ಲ ಎಂದು ಆದೇಶ ನೀಡಬೇಕು,” ಎಂದು ಕೋರಿ ಇಬ್ಬರು ರೋಹಿಂಗ್ಯಾಗಳು ಕೋರ್ಟಿಗೆ ಹೋಗಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ ವಿವೇಚನೆಯ ಮಾರ್ಗ ಅನುಸರಿಸಿ ಕೇಂದ್ರದ ವರದಿ ಕೇಳಿದೆ. ”ನಿರಾಶ್ರಿತರ ಸಮಸ್ಯೆಯು ಕೇಂದ್ರ ಸರಕಾರದ ತಲೆನೋವೇ ಹೊರತು ಕೋರ್ಟ್‌ ತೀರ್ಮಾನ ಮಾಡಬೇಕಾದ ವಿಚಾರವಲ್ಲ. ಭಾರತೀಯ ಪ್ರಜೆ ಮಾತ್ರ ಇಲ್ಲಿನ ಕೋರ್ಟ್‌ಗಳಲ್ಲಿ ನ್ಯಾಯ ಕೇಳಬಹುದು; ನಿರಾಶ್ರಿತರಲ್ಲ,” ಎಂಬ ಖಡಕ್‌ ಉತ್ತರವನ್ನು ಸರಕಾರ ನೀಡಿದೆ.

 

  • ರೋಹಿಂಗ್ಯಾಗಳನ್ನು ಗಡೀಪಾರು ಮಾಡುವ ಮಾತಾಡುತ್ತಿದೆ ಕೇಂದ್ರ. ಆದರೆ, ರೋಹಿಂಗ್ಯಾಗಳನ್ನು ಗಡೀಪಾರು ಮಾಡುವುದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ, ಕಳೆದ ಎರಡು ವರ್ಷಗಳಿಂದ 11 ರೋಹಿಂಗ್ಯಾ ಕೈದಿಗಳನ್ನು ಮರಳಿ ಕಳಿಸಲು ಸರಕಾರ ಪ್ರಯತ್ನಿಸುತ್ತಲೇ ಇದೆ. ಮ್ಯಾನ್ಮಾರ್‌ ಅವರನ್ನು ಮರಳಿ ಕರೆದುಕೊಳ್ಳಲು ಸಿದ್ಧವಿಲ್ಲ. ಇನ್ನು 40,000 ಮಂದಿಯನ್ನು ಅದು ಯಾಕೆ ಕರೆದುಕೊಳ್ಳುತ್ತದೆ . ರೋಹಿಂಗ್ಯಾಗಳು ತಮ್ಮ ಪ್ರಜೆಗಳೇ ಅಲ್ಲವೆಂಬುದು ಅದರ ವಾದ.

 

ರೋಹಿಂಗ್ಯಾಗಳಿಗೆ ಯಾಕೆ ಆಶ್ರಯವಿಲ್ಲ?

 

  • ಐಸಿಸ್‌, ಐಎಸ್‌ಐ ಮುಂತಾದ ಅನ್ಯ ದೇಶಗಳ ಉಗ್ರ ಸಂಘಟನೆಗಳ ಜೊತೆ ಸಂಪರ್ಕದ ಆತಂಕ.
  • ಸರಿಯಾದ ನೆಲೆ ಕಲ್ಪಿಸಲು ಸಂಪನ್ಮೂಲದ ಕೊರತೆ.
  • ಬಾಂಗ್ಲಾದೇಶದ ನಿರಾಶ್ರಿತರಿಂದ ಉಂಟಾಗಿರುವ ಭದ್ರತೆಯ ಆತಂಕ.
  • ಮ್ಯಾನ್ಮಾರ್‌ನ ಜೊತೆ ಸಂಬಂಧ ಕೆಡುವ ಕಳವಳ.

 

ಯಾವ ಯಾವ ರಾಷ್ಟ್ರದಿಂದ ವಲಸೆ ಬರುತ್ತಾರೆ ?

 

ಬಾಂಗ್ಲಾದೇಶಿಯರು

 

  • ಇಂದಿಗೂ ಭಾರತ ತನ್ನ ನೈರುತ್ಯ ಭಾಗದಲ್ಲಿ ವಲಸಿಗ ಮತ್ತು ನಿರಾಶ್ರಿತ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ದೊಡ್ಡ ಪ್ರಮಾಣದಲ್ಲಿ ವಲಸಿಗ ಪ್ರಕ್ರಿಯೆ ಘಟಿಸಿದ್ದು 1971ರ ಬಾಂಗ್ಲಾದೇಶ ಸ್ವಾತಂತ್ರ್ಯ ಯುದ್ಧದ ಸಂದರ್ಭದಲ್ಲಿ. ಈಗ ‘ಬಾಂಗ್ಲಾದೇಶ’ ಎಂದು ಕರೆಸಿಕೊಳ್ಳುವ ಆಗಿನ ‘ಪೂರ್ವ ಪಾಕಿಸ್ತಾನ’ದಲ್ಲಿದ್ದ ಬಹಳಷ್ಟು ಹಿಂದೂಗಳು ಆಶ್ರಯ ಬಯಸಿ ಭಾರತಕ್ಕೆ ಬಂದರು.
  • ಈ ಯುದ್ಧದ ವೇಳೆ ನಿರಾಶ್ರಿತರಿಗೆ ಭಾರತ ತನ್ನ ಗಡಿಯನ್ನು ತೆರೆದಿಟ್ಟಿತ್ತು. ಪಾಕಿಸ್ತಾನ ಸೇನೆ ಬಾಂಗ್ಲಾದೇಶದಲ್ಲಿ ನಡೆಸುತ್ತಿದ್ದ ಸಾಮೂಹಿಕ ಹತ್ಯಾಕಾಂಡಕ್ಕೆ ಹೆದರಿ 10 ಲಕ್ಷ ಕ್ಕೂ ಹೆಚ್ಚು ನಿರಾಶ್ರಿತರು ಭಾರತಕ್ಕೆ ಬಂದರು. ಹೀಗೆ ಬಂದವರಿಗೆ ಭಾರತವು ಪಶ್ಚಿಮ ಬಂಗಾಳ, ಅಸ್ಸಾಮ್‌, ಮೇಘಾಲಯ, ತ್ರಿಪುರಾಗಳಲ್ಲಿ ಆಶ್ರಯ ಕಲ್ಪಿಸಿತು. ಗಡಿಯ ಹತ್ತಿರದಲ್ಲಿ ನಿರಾಶ್ರಿತ ಶಿಬಿರಗಳನ್ನು ತೆರೆಯಿತು.
  • ಇದಕ್ಕೂ ಮೊದಲು ಅಂದರೆ, 1947ರ ಇಬ್ಭಾಗದ ವೇಳೆಯೂ ಭಾರಿ ಸಂಖ್ಯೆಯಲ್ಲಿ ವಲಸೆ ಪ್ರಕ್ರಿಯೆ ನಡೆಯಿತು. ಆಗ ಬಂದ ಹೆಚ್ಚಿನವರು ಹಿಂದೂಗಳಾಗಿದ್ದರು. ಅವರನ್ನು ಬಂಗಾಳಿಗಳು ಎಂದು ಕರೆಯಲಾಗುತ್ತಿತ್ತು. 1947ರಲ್ಲಿ ಬಾಂಗ್ಲಾದೇಶ(ಪೂರ್ವ ಪಾಕಿಸ್ತಾನ)ದಲ್ಲಿ ಶೇ.30ರಷ್ಟು ಹಿಂದೂಗಳಿದ್ದರು. ಆದರೆ, ಇಬ್ಭಾಗವಾದ ಬಳಿಕ ಹಿಂದೂಗಳ ಸಂಖ್ಯೆ ಶೇ.19ಕ್ಕೆ ಕುಸಿಯಿತು.ಈ ಪ್ರಮಾಣ 1991ರ ಹೊತ್ತಿಗೆ ಶೇ.10ಕ್ಕೆ ಇಳಿಯಿತು.
  • 2001ರ ಹೊತ್ತಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕೇವಲ ಶೇ.2ರಷ್ಟಿತ್ತು. ನಂತರದ ವರ್ಷಗಳಲ್ಲಿ ಈ ಪ್ರಮಾಣ ಇನ್ನೂ ಕುಸಿಯಿತು ಎಂದು ಹೇಳಬಹುದು. ಜತೆಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಮುಸ್ಲಿಮರು ನುಸುಳುವುದು ಕೂಡ ಹೆಚ್ಚಿದೆ. ಪಶ್ಚಿಮ ಬಂಗಾಳದಲ್ಲಿ ಶೇ.9(1951)ರಷ್ಟಿದ್ದ ಮುಸ್ಲಿಮರ ಸಂಖ್ಯೆ ಇದೀಗ ಶೇ.28(2001ರ ಜನಗಣತಿ)ಕ್ಕಿಂತಲೂ ಹೆಚ್ಚಿದೆ.
  • ಇದರ ಅರ್ಥ ಏನಂದರೆ; ಬಾಂಗ್ಲಾದಿಂದ ಮುಸ್ಲಿಮರು ಕೂಡ ಆಶ್ರಯ ಬಯಸಿ ಅಕ್ರಮವಾಗಿ ಭಾರತದೊಳಗೆ ಬಂದು ಬಿಟ್ಟಿದ್ದಾರೆ. ಇದು ಪಶ್ಚಿಮ ಬಂಗಾಳದಲ್ಲಿ ನಾನಾ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ. ಅದರಲ್ಲೂ ಚುನಾವಣೆಗಳು ಎದುರಾದಾಗ, ಹಿಂದೂ-ಮುಸ್ಲಿಮ್‌ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಹೀಗೆ ಅಕ್ರಮವಾಗಿ ನುಸುಳಿಕೊಂಡ ಬಾಂಗ್ಲಾ ಮುಸ್ಲಿಮರು ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲ ದೇಶದ ಇತರೆ ರಾಜ್ಯಗಳಲ್ಲೂ ಕಂಡು ಬರುತ್ತಾರೆ. ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಅಕ್ರಮ ವಲಸಿಗರಿದ್ದಾರೆ.

 

ಆಫ್ಘನ್‌ ನಿರಾಶ್ರಿತರು

 

  • 1979ರಿಂದ 1989ರ ಅವಧಿಯಲ್ಲಿ ಅಂದರೆ, ಸೋವಿಯತ್‌ ಮತ್ತು ಆಫ್ಘನ್‌ ಯುದ್ಧದ ವೇಳೆ 60 ಸಾವಿರ ಆಫ್ಘನ್‌ ನಿರಾಶ್ರಿತರು ಭಾರತಕ್ಕೆ ಬಂದರು. ಅಧಿಕೃತವಾಗಿ ಭಾರತ ಸರಕಾರವು ಅವರನ್ನು ನಿರಾಶ್ರಿತರೆಂದು ಗುರುತಿಸಿಲ್ಲ. ಆದರೂ, ಅವರಿಗೆ ಆಶ್ರಯ ಕಲ್ಪಿಸುವ ಸಂಬಂಧ ವಿಶ್ವಸಂಸ್ಥೆಯ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಜತೆಗೆ ತಾಲಿಬಾನ್‌ ಆಡಳಿತದಲ್ಲಿ ಕೆಲವು ಹಿಂದೂ ಮತ್ತು ಸಿಖ್‌ ನಿರಾಶ್ರಿತರು ಭಾರತಕ್ಕೆ ಆಶ್ರಯ ಬಯಸಿ ಬಂದಿದ್ದಾರೆ. ಅವರೆಲ್ಲರೂ ದಿಲ್ಲಿ ಸೇರಿದಂತೆ ಉತ್ತರ ಭಾರತದ ಕೆಲವು ನಗರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

 

ಪಾಕಿಸ್ತಾನದಿಂದ

 

  • ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದಾಗಲೂ ಭಾರಿ ಪ್ರಮಾಣದಲ್ಲಿ ವಲಸೆ ಪ್ರಕ್ರಿಯೆ ನಡೆಯಿತು. ಅಂದಾಜು 12ರಿಂದ 15 ಲಕ್ಷ ಜನರು ಗಡಿ ದಾಟಿ ಬಂದರು. ಇದಾದ ಬಳಿಕವೂ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುವವರಲ್ಲಿ ಕುಂಠಿತವಾಗಿಲ್ಲ. ಕಾಲಾಂತರದಲ್ಲಿ ಪಾಕಿಸ್ತಾನದಿಂದ ಬಹಳಷ್ಟು ಹಿಂದೂಗಳು ಭಾರತಕ್ಕೆ ನಿರಾಶ್ರಿತರಾಗಿ ಬಂದಿದ್ದಾರೆ. ಇತ್ತೀಚಿನ ಮಾಹಿತಿಗಳ ಪ್ರಕಾರ, ಪಾಕಿಸ್ತಾನದ 400 ಹಿಂದೂ ಕುಟುಂಬಗಳು ಅಹ್ಮದಾಬಾದ್‌, ಸೂರತ್‌, ಜೋಧಪುರ, ಜೈಸಲ್ಮೇರ್‌, ಬಿಕ್ನೇರ್‌ ಮತ್ತು ಜೈಪುರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಬಂದ 4,300ಕ್ಕೂ ಹೆಚ್ಚು ಹಿಂದೂ ಮತ್ತು ಸಿಖ್‌ ಜನರಿಗೆ ಭಾರತ ಸರಕಾರವು 2015ರಲ್ಲಿ ಪೌರತ್ವ ನೀಡಿದೆ.

 

ಟಿಬೆಟಿಯನ್ನರು

 

  • 1959ರಲ್ಲಿ ಚೀನಾದ ರೆಡ್‌ ಆರ್ಮಿ ದಾಳಿ ಮಾಡಿದಾಗ, ಅವರಿಂದ ತಪ್ಪಿಸಿಕೊಳ್ಳಲು 14ನೇ ದಲಾಯಿ ಲಾಮಾ ಭಾರತಕ್ಕೆ ಬಂದರು. ಅವರಿಗೂ ಅವರ ಅನುಯಾಯಿಗಳಿಗೂ ಪ್ರಧಾನಿ ನೆಹರೂ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೆಲೆ ಕಲ್ಪಿಸಿಕೊಟ್ಟರು. ಅಂದಿನಿಂದ ಇಂದಿನವರೆಗೂ ಸರಕಾರಿ ಲೆಕ್ಕದಂತೆ 60,000 ಮಂದಿ ಇಲ್ಲಿಗೆ ಬಂದು ನೆಲೆಸಿದ್ದಾರೆ.
  • ಅನಧಿಕೃತವೂ ಸೇರಿಸಿದರೆ 1,20,000 ಮಂದಿ. ಧರ್ಮಶಾಲಾದಲ್ಲಿ ಟಿಬೆಟಿಗರ ಚಟುವಟಿಕೆಗಳನ್ನು ನಿಯಂತ್ರಿಸುವ ‘ಬಹಿಷ್ಕೃತ ಸರಕಾರ’ವನ್ನು ಲಾಮಾ ನಡೆಸುತ್ತಿದ್ದಾರೆ. ಟಿಬೆಟಿಗರಿಗೆ ಧರ್ಮಶಾಲಾ ಸೇರಿದಂತೆ ದೇಶದ ಹಲವಾರು ಕಡೆ ಶಿಬಿರಗಳನ್ನು ನೀಡಲಾಗಿದೆ.
  • ಕರ್ನಾಟಕದಲ್ಲಿ ಮೂರು ಕಡೆ- ಮೈಸೂರು ಜಿಲ್ಲೆಯ ಬೈಲುಕುಪ್ಪೆ, ಹುಣಸೂರಿನ ಗುರುಪುರ, ಕೊಳ್ಳೇಗಾಲದ ಒಡೇರಪಾಳ್ಯ, ಉತ್ತರಕನ್ನಡದ ಮುಂಡಗೋಡ ಇವರ ಶಿಬಿರಗಳಿವೆ. ಭಾರತ ಸರಕಾರ ಇವರಿಗೆ ವಿಶೇಷ ಶಾಲೆಗಳನ್ನು ಕಟ್ಟಿಸಿಕೊಟ್ಟಿದೆ. ಉಚಿತ ಶಿಕ್ಷಣ, ಆರೋಗ್ಯ ಸೇವೆ, ಸ್ಕಾಲರ್‌ಶಿಪ್‌, ಕೆಲವೆಡೆ ಮೆಡಿಕಲ್‌, ಇಂಜಿನಿಯರಿಂಗ್‌ ಸೀಟುಗಳನ್ನೂ ನೀಡಲಾಗುತ್ತಿದೆ. ಪ್ರತಿ ನಿರಾಶ್ರಿತನಿಗೂ ನೋಂದಣಿ ಸರ್ಟಿಫಿಕೇಟ್‌ (ಆರ್‌ಸಿ) ನೀಡಲಾಗುತ್ತಿದ್ದು, ಅದನ್ನು ವರ್ಷಕ್ಕೊಮ್ಮೆ ನವೀಕರಿಸಲಾಗುತ್ತದೆ. ಹೊಸತಾಗಿ ಬರುತ್ತಿರುವವರಿಗೆ ಇದನ್ನು ನೀಡಲಾಗುತ್ತಿಲ್ಲ.

 

ನಿರಾಶ್ರಿತರ ಸಮಸ್ಯೆಗಳೇನು?

 

  • ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂತ್ರಸ್ತರಾಗಿ ಆಗಮಿಸುವ ನಿರಾಶ್ರಿತರು ಮೂಲ ಆಸ್ತಿಗಳನ್ನು ಕಳೆದುಕೊಳ್ಳುತ್ತಾರೆ.
  • ನಿರಾಶ್ರಿತರ ಪೈಕಿ ಕೆಲವು ಹೆಂಗಸರು ಮತ್ತು ಯುವತಿಯರ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ.
  • ಅವರ ಬೆಂಬಲಕ್ಕೆ ಕಾನೂನುಗಳು ನೆರವು ನೀಡುವುದಿಲ್ಲ.
  • ಭಾರತವಂತೂ ನಿರಾಶ್ರಿತರಿಗೆ ಅಂಥ ಸೂಕ್ತ ದೇಶವಲ್ಲ.
  • ಸರಕಾರ ಅವರಿಗೆ ಭದ್ರತೆಯನ್ನು ಮಾತ್ರ ಒದಗಿಸಬಲ್ಲದು. ಅದಕ್ಕಿಂತ ಹೆಚ್ಚಿನದ್ದು ಏನೂ ಮಾಡಲು ಸಾಧ್ಯವಿಲ್ಲ.
  • ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ನಿರಾಶ್ರಿತರ ದುಃಖದಾಯಕ ಬದುಕು ಹಾಗೇ ಇದೆ.

 

ತೊಂದರೆಗಳೇನು?

 

  • ವಲಸೆ ಮತ್ತು ನಿರಾಶ್ರಿತ ಸಮಸ್ಯೆ ಇದೀಗ ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಭಾರತವೂ ಸೇರಿದಂತೆ ಬಹುತೇಕ ಎಲ್ಲ ರಾಷ್ಟ್ರಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ.
  • ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಸಮಸ್ಯೆಯ ತೀವ್ರತೆ ಇನ್ನೂ ತೀವ್ರವಾಗಿದೆ.
  • ಭಾರತದಲ್ಲಿ ನಿರಾಶ್ರಿತ ಸಮಸ್ಯೆ ದೀರ್ಘಕಾಲೀನ ಸಮಸ್ಯೆಯಾಗಿ ಮಾರ್ಪಟ್ಟಿದೆ.
  • ಸಂತ್ರಸ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಅಸಾಧ್ಯದ ಮಾತು. ಇದು ನಾನಾ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.
  • ಖಜಾನೆಯ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.

 

ಇದಕ್ಕೆ ಸಂಬಂದಿಸಿದ ಅಂತಾರಾಷ್ಟ್ರೀಯ  ಕಾನೂನು ಗಳೇನು ?

  • ನಿರಾಶ್ರಿತರಿಗೆ ಆಶ್ರಯ ನೀಡುವ ಅಥವಾ ನೀಡದಿರುವ ಬಗ್ಗೆ ಆಯಾ ದೇಶ ತನ್ನದೇ ಆದ ನಿಲುವು ಹೊಂದಬಹುದು. ಈ ಕುರಿತು ಅಂತಾರಾಷ್ಟ್ರೀಯ ಕಾನೂನು ಎಂಬುದೇನೂ ಇಲ್ಲವಾದರೂ, ವಿಶ್ವಸಂಸ್ಥೆ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.
  • ‘1959ರ ವಿಶ್ವಸಂಸ್ಥೆ ನಿರಾಶ್ರಿತರ ಸ್ಥಿತಿಗತಿ ಒಡಂಬಡಿಕೆ’ ಹಾಗೂ ‘1967ರ ವಿಶ್ವಸಂಸ್ಥೆ ನಿರಾಶ್ರಿತರ ಸ್ಥಿತಿಗತಿ ಶಿಷ್ಟಾಚಾರ ಸಂಹಿತೆ’ಗಳಿಗೆ 146 ದೇಶಗಳು ಸಹಿ ಹಾಕಿವೆ. ಈ ದೇಶಗಳು, ತಮ್ಮಲ್ಲಿಗೆ ಬರುವ ನಿರಾಶ್ರಿತರಿಗೆ ಆಶ್ರಯ ನೀಡುವ, ಅವರಿಗೆ ತಾತ್ಕಾಲಿಕ ಅಥವಾ ಶಾಶ್ವತ ವಸತಿ ನೀಡುವ, ಅವರ ಮಾನವ ಹಕ್ಕುಗಳನ್ನು ಕಾಪಾಡುವ ನಡವಳಿಗಳಿಗೆ ಬದ್ಧವಾಗಿವೆ.
  • ಆದರೆ ದೇಶದ ಭದ್ರತೆಗೆ ಆತಂಕವಿದ್ದಲ್ಲಿ, ವಲಸಿಗರಿಗೆ ಆಶ್ರಯವನ್ನು ನಿರಾಕರಿಸುವ ಸ್ವಾತಂತ್ರ್ಯವೂ ಇದೆ. ಆದರೆ ಈ ಎರಡೂ ನಿಯಮಾವಳಿಗಳಿಗೂ ಭಾರತ ಸಹಿ ಹಾಕಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಸರಕಾರ ಇದೇ ವಾದವನ್ನು ಮುಂದಿಟ್ಟಿದೆ.

 

ನಿರಾಶ್ರಿತರ ಪಾಲಿಸಿ

 

  • ಭಾರತದಲ್ಲಿ ಇಷ್ಟೊಂದು ಪ್ರಮಾಣದ ನಿರಾಶ್ರಿತರಿದ್ದರೂ, ಅವರನ್ನು ಹೇಗೆ ಒಳಗೊಳ್ಳಬೇಕು ಅಥವಾ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಯಾವುದೇ ಆಡಳಿತಾತ್ಮಕ ಪಾಲಿಸಿಗಳು ರೂಪುಗೊಂಡಿಲ್ಲ. ಈ ಹೊತ್ತಿಗಾದರೂ ಅದು ರೂಪುಗೊಳ್ಳಬೇಕಾದ ಅಗತ್ಯ ಕಂಡುಬಂದಿದೆ ಎನ್ನಬಹುದು. ಈಗಿರುವಂತೆ, ಕೇಂದ್ರವು ಟಿಬೆಟಿಗರಿಗೆ ನೋಂದಣಿ ಪ್ರಮಾಣಪತ್ರಗಳನ್ನು ನೀಡುತ್ತಿದೆ.
  • ಶ್ರೀಲಂಕಾ ತಮಿಳರನ್ನು ಕ್ಯಾಂಪ್‌ ನಿರಾಶ್ರಿತರು ಹಾಗೂ ಕ್ಯಾಂಪೇತರ ನಿರಾಶ್ರಿತರು ಎಂದು ವಿಂಗಡಣೆ ಮಾಡಿದೆ. ಇನ್ನಿತರ ದೇಶಗಳ ಹಿಂದೂ, ಬೌದ್ಧ, ಜೈನ, ಕ್ರೈಸ್ತ ನಿರಾಶ್ರಿತರಿಗೆ ದೀರ್ಘಾವಧಿ ವೀಸಾಗಳನ್ನು ನೀಡಿದೆ. ಸಮಗ್ರವಾದ ನೀತಿಯೊಂದನ್ನು ಸರಕಾರ ರೂಪಿಸಬೇಕಿದೆ. 2015ರಲ್ಲಿ ಈ ಕುರಿತು ವಿಧೇಯಕವೊಂದನ್ನು ಶಶಿ ತರೂರ್‌ ಸಂಸತ್ತಿನಲ್ಲಿ ಮಂಡಿಸಿದ್ದರು. ಅದು ಇನ್ನೂ ಪರಿಗಣನೆಗೆ ಬಂದಿಲ್ಲ.

 

ಮುಂದಿನ ಹಾದಿ

 

ದ್ವೀಪ ರಾಷ್ಟ್ರ ಲಂಕಾದಲ್ಲಿ ತಮಿಳು ಈಳಂ ವಿಮೋಚನಾ ವ್ಯಾಘ್ರ(ಎಲ್‌ಟಿಟಿಇ) ಮತ್ತು ಸರಕಾರದ ನಡುವಣ ಸಂಘರ್ಷದಿಂದ ದಶಕಗಳ ಕಾಲ ಕುದಿಯುತ್ತಿದ್ದ ಈ ದೇಶದ ಪಾಲಿಗೆ ಭಾರತ ನೆರೆಮನೆಯಂತೆ ಕಂಡಿತು. 2009ರಲ್ಲಿ ತಮಿಳು ವ್ಯಾಘ್ರಗಳನ್ನು ಲಂಕಾ ಸೇನೆ ಬಗ್ಗು ಬಡಿಯಿತು. ಇದೊಂದು ರಕ್ತಸಿಕ್ತ ಚರಿತ್ರೆ. ಏನಿಲ್ಲವೆಂದರೂ ಮೂರು ಲಕ್ಷ ಮಂದಿ ನಿರ್ವಸಿತರಾದರು. ಇಂಥ ಬಹತೇಕರಿಗೆ ಭಾರತ ಆಪ್ಯಾಯಮಾನವಾಗಿ ಕಂಡಿತು. ತಮಿಳುನಾಡಿನ ಕಡಲೂರಿನಲ್ಲಿ ಸೂರ್ಯಮುಳುಗಿದ ನಂತರ ಸಮುದ್ರದತ್ತ ದೃಷ್ಟಿಸಿದರೆ ಲಂಕಾ ಸಾಮ್ರಾಜ್ಯದಲ್ಲಿ ದೀಪುಗಳು ಮಿನುಗುವುದು ಕಾಣಿಸುತ್ತದೆ. ಅಷ್ಟೊಂದು ನಮಗೂ ಆ ದೇಶಕ್ಕು ಅಷ್ಟೊಂದು ನಿಕಟ ನಂಟು. 1983ರಿಂದ 1987ರ ವರೆಗೆ ಏನಿಲ್ಲವೆಂದರೂ ಒಂದೂ ಕಾಲು ಲಕ್ಷ ಲಂಕಾ ತಮಿಳರ ಮೊದಲ ಗುಂಪು ಭಾರತವನ್ನು ಪ್ರವೇಶಿಸಿತು.

ಇದಲ್ಲದೆ ಇನ್ನೂ ಮೂರು ತಂಡಗಳಲ್ಲಿ ಭಾರತಕ್ಕೆ ಅವರು ಬಂದಿದ್ದರೂ ಎಷ್ಟು ಮಂದಿ ಇದ್ದಾರೆ ಎಂದು ನಿಖರವಾದ ಲೆಕ್ಕವನ್ನು ಯಾರೂ ಇಟ್ಟಿಲ್ಲ. ತಮಿಳುನಾಡುವೊಂದರಲ್ಲೇ 112ಕ್ಯಾಂಪ್‌ಗಳಿದ್ದು ಅಲ್ಲಿ 60 ಸಾವಿರ ಜನ ತಳವೂರಿದ್ದಾರೆ. ಕಿರಿಯ ತಲೆಮಾರಿಗೆ ತಮಿಳುನಾಡೇ ಸ್ವಂತಮನೆಯೂ ಆಗಿದೆ. ತಮಿಳು ನಿರಾಶ್ರಿತರನ್ನು ಲಂಕಾಗೆ ವಾಪಸ್‌ ಕಳುಹಿಸುವ ಪ್ರಕ್ರಿಯೆ 1992ರಲ್ಲಿ ಚಾಲನೆಗೆ ಬಂತು. ಆದರೆ ಅದು ಅಷ್ಟು ವೇಗವನ್ನು ಪಡೆಯಲಿಲ್ಲ. ಇಷ್ಟಪಟ್ಟರೆ ಮಾತ್ರ ಅವರನ್ನು ವಾಪಸ್‌ ಕಳುಹಿಸುತ್ತೇವೆ ಎಂದು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌, ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು.

ತಮಿಳುನಾಡು ಕೂಡ ತನ್ನ ರಾಜ್ಯದಿಂದ ಲಂಕಾ ತಮಿಳರನ್ನು ಹೊರದಬ್ಬಲು ಇಷ್ಟಪಡಲಿಲ್ಲ. ಅಲ್ಲಿನ ಪಕ್ಷಗಳ ಪಾಲಿಗೆ ಇದೊಂದು ರಾಜಕೀಯ ವಿಷಯಕೂಡ ಆಗಿದೆ. ಜನಾಂಗೀಯ ಕಲಹದ ಕಹಿ ನೆನಪುಗಳನ್ನು ಹೊತ್ತು ಭಾರತಕ್ಕೆ ಬಂದಿರುವ ಈ ಜನಕ್ಕೆ ಇದೀಗ ಶ್ರೀಲಂಕಾದಲ್ಲಿ ಶಾಂತಿ ನೆಲೆಸಿದ್ದರೂ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಇಬ್ಬಂದಿತನ ಇಂದಿಗೂ ಇದೆ. ” ಹಲವರು ಮರಳಿ ತೆರಳಿ ಹೊಸ ಜೀವನ ಕಟ್ಟಿಕೊಂಡಿದ್ದಾರೆ. ನಿಜಕ್ಕೂ ಅಲ್ಲಿ ಸ್ವಾತಂತ್ರ್ಯದ ಭಾವವಿದೆ,” ಎಂಬುದು ಹಲವರ ಅಭಿಮತ. ತಾವಾಗಿಯೇ ಅಲ್ಲಿಗೆ ತೆರಳುವವರಿಗೆ ವಿಶ್ವಸಂಸ್ಥೆಯ ಹೈಕಮೀಷನ್‌, ಚೆನ್ನೈನಲ್ಲಿ ಲಂಕಾಗೆ ತೆರಳುವ ನಿರಾಶ್ರಿತರಿಗೆ ಉಚಿತ ವಿಮಾನ ಟಿಕೆಟ್‌ ಒದಗಿಸಿತ್ತು. ಆದರೆ ಹೀಗೆ ಮರಳಿ ಹೋದವರ ಸಂಖ್ಯೆ ಗಮನಾರ್ಹವಾಗಿಯೇನೂ ಇಲ್ಲ. ತಮಿಳು ಸರಕಾರ ಈ ನಿರಾಶ್ರಿತರಿಗೆ ವಸತಿ, ಕೊಂಚ ನಗದು  ಹಾಗೂ ಉಚಿತ ಅಕ್ಕಿ ಯನ್ನು ಕಾಲದಿಂದ ಕಾಲಕ್ಕೆ ಪೂರೈಸುತ್ತ ಬಂದಿದೆ. ಹೀಗಾಗಿ ಮರಳಿ ಲಂಕಾಗೆ ಹೋದರೆ ಇಷ್ಟು ಸೌಲಭ್ಯವೂ ಸಿಗುವುದಿಲ್ಲ ಎಂಬುದು ಕೆಲವರ ಚಿಂತೆ.

 

 

CLICK HERE TO JOIN NIALP FOUNDATION COURSE-2019

Share