20th DECEMBER
1.ವಿದೇಶಗಳಲ್ಲೂ ಐಐಎಂ ಕ್ಯಾಂಪಸ್, ಪದವಿ ಪ್ರದಾನಕ್ಕೆ ಸಂಸತ್ ಅಸ್ತು
ಪ್ರಮುಖ ಸುದ್ದಿ
- ಭಾರತೀಯ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳು ‘ರಾಷ್ಟ್ರೀಯ ಮಹತ್ವದ ಸಂಸ್ಥೆಗಳಾಗಿದ್ದು’ ವಿದೇಶಗಳಲ್ಲಿ ಕ್ಯಾಂಪಸ್ ಸ್ಥಾಪಿಸಿ ಹಾಗು ಸ್ನಾತಕೋತ್ತರ ಡಿಪ್ಲೊಮಗಳ ಬದಲಿಗೆ ಡಿಗ್ರಿ ನೀಡುವ ಅಧಿಕಾರಕ್ಕೆ ಅನುಮತಿ ನೀಡುವ ವಿಧೇಯಕವನ್ನು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ.
ಮಸೂದೆಯ ಪ್ರಮುಖ ಲಕ್ಷಣಗಳು:
- ಮುಂಚೂಣಿಯಲ್ಲಿರುವ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಿಗೆ ಮತ್ತಷ್ಟು ಸ್ವಾಯತ್ತೆ ನೀಡುವ ಉದ್ದೇಶವುಳ್ಳ ಈ ವಿಧೇಯಕವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಲೋಕಸಭೆಯಲ್ಲಿ ಫೆಬ್ರವರಿ ರಂದು ಮಂಡಿಸಿದ್ದರು. ಕೆಳಮನೆಯಲ್ಲೂ ಈ ವಿಧೇಯಕ ಸರ್ವಾನುಮತದ ಅನುಮೋದನೆ ಪಡೆದಿತ್ತು.
- ಐಐಎಂಗಳಿಗೆ ಶಾಸನಬದ್ಧ ಅಧಿಕಾರ ನೀಡುವ ಈ ವಿಧೇಯಕವು, ಕೇಂದ್ರ ಸರಕಾರ ಕಾಲಕಾಲಕ್ಕೆ ನೀಡುವ ಮಾರ್ಗದರ್ಶನಗಳಿಗೆ ಅನುಗುಣವಾಗಿ ವಿದೇಶಗಳಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣ ನೀಡುವ ಅವಕಾಶ ಒದಗಿಸುತ್ತದೆ.
- ಪ್ರತಿ ಐಐಎಂನ ಆಡಳಿತ ಮಂಡಳಿ (ಬೋರ್ಡ್ ಆಫ್ ಗವರ್ನರ್ಸ್)ಯೂ ಪ್ರಧಾನ ಕಾರ್ಯನಿರ್ವಹಣಾ ಸಂಸ್ಥೆಯಾಗಿದ್ದು, ತಮ್ಮದೇ ಆಯ್ಕೆಯ ಮುಖ್ಯಸ್ಥರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಈ ವಿಧೇಯಕ ನೀಡುತ್ತದೆ.
- ಕೇಂದ್ರ ಸರಕಾರಕ್ಕೆ ಬದಲಾಗಿ, ಆಡಳಿತ ಮಂಡಳಿಯೇ ತನ್ನ ನಿರ್ದೇಶಕರನ್ನು (ಈಗ ಸಿಇಓ ಎಂದು ಕರೆಯಲಾಗುತ್ತಿದೆ) ನೇಮಿಸಿಕೊಳ್ಳಬಹುದು. ಅಲ್ಲದೆ ಅನ್ವೇಷಣೆ ಮತ್ತು ಆಯ್ಕೆ ಸಮಿತಿಯನ್ನು ಆಡಳಿತ ಮಂಡಳಿಯೇ ರಚಿಸಿಕೊಳ್ಳುತ್ತದೆ.
- ಈ ಸಮಿತಿಯಲ್ಲಿ ಬೋರ್ಡ್ ಮುಖ್ಯಸ್ಥರು ಮತ್ತು ಮೂವರು ಸದಸ್ಯರಿರುತ್ತಾರೆ. ಈ ಸದಸ್ಯರನ್ನು ಗಣ್ಯ ಆಡಳಿತಗಾರರು, ಉದ್ಯಮಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು ಮತ್ತು ಮ್ಯಾನೇಜ್ಮೆಂಟ್ ತಜ್ಞರ ವಲಯದಿಂದ ಆರಿಸಿಕೊಳ್ಳಬೇಕಾಗುತ್ತದೆ.
- ಪ್ರತಿ ಐಐಎಂನ ಗವರ್ನರ್ ಮಂಡಳಿಯಲ್ಲಿ ಒಬ್ಬ ಮುಖ್ಯಸ್ಥರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಾಮಕರಣಗೊಳ್ಳುವ ಇಬ್ಬರು ಸದಸ್ಯರು, ಒಬ್ಬ ಮಹಿಳೆಯೂ ಸೇರಿದಂತೆ ನಾಲ್ವರು ಶ್ರೇಷ್ಠ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ.
- ಈ ನಾಲ್ವರನ್ನು ಶಿಕ್ಷಣ, ಉದ್ಯಮ, ವಾಣಿಜ್ಯ, ಸಮಾಜಸೇವೆ ಅಥವಾ ಸಾರ್ವಜನಿಕ ಆಡಳಿತ ಕ್ಷೇತ್ರದಿಂದ ಆರಿಸಿಕೊಳ್ಳಲಾಗುತ್ತದೆ. ಇಬ್ಬರು ಬೋಧಕ ಸಿಬ್ಬಂದಿಗಳು, ಎಸ್ಸಿ ಅಥವಾ ಎಸ್ಟಿ ವಿಭಾಗದಿಂದ ಒಬ್ಬ ಸದಸ್ಯ ಮತ್ತು ಹಳೆ ವಿದ್ಯಾರ್ಥಿಗಳ ಬಳಗದಿಂದ ಐವರು ಈ ಬೋರ್ಡ್ನ ಸದಸ್ಯರಾಗಿರುತ್ತಾರೆ. ಕನಿಷ್ಠ ಮೂವರು ಮಹಿಳಾ ಸದಸ್ಯರು ಇರುವುದು ಕಡ್ಡಾಯ.
- ಹಳೆಯ ಕರಡು ವಿಧೇಯಕದಲ್ಲಿ ಅಧ್ಯಕ್ಷರು ವೀಕ್ಷಕರಾಗಿದ್ದು ನಿರ್ದೇಶಕರನ್ನು ಆರಿಸುತ್ತಾರೆ ಎನ್ನಲಾಗಿತ್ತು. ಆದರೆ ಎಚ್ಆರ್ಡಿ ಸಚಿವಾಲಯ ಈ ಅಂಶವನ್ನು ತೆಗೆದುಹಾಕಿ ಈ ಸಂಸ್ಥೆಗಳನ್ನು ಮತ್ತಷ್ಟು ಸ್ವಾಯತ್ತಗೊಳಿಸಲು ಮುಂದಾಗಿದೆ. ಐಐಎಂಗಳು ಇದುವರೆಗೂ ಸೊಸೈಟಿಗಳಾಗಿ ನೋಂದಣಿಯಾಗಿದ್ದವು. ಹೀಗಾಗಿ ತಮ್ಮ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಸೇರಿದಂತೆ ಪದವಿ ಪ್ರದಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ.
2.ಇ-ಸಿಗರೇಟ್ ತಡೆಗೆ : ಕೇಂದ್ರ ಚಿಂತನೆ
ಪ್ರಮುಖ ಸುದ್ದಿ
- ಎಲೆಕ್ಟ್ರಾನಿಕ್ ಧೂಮಪಾನ (ಇ-ಸ್ಮೋಕಿಂಗ್) ತಡೆಗಟ್ಟಲು ಆರೋಗ್ಯ ಸಚಿವಾಲಯ ರಚಿಸಿದ್ದ ಮೂರು ಸಮಿತಿಗಳು ನೀಡಿದ ವರದಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸಚಿವವಾಲಯ ತಿಳಿಸಿದೆ.
- ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಇ-ಸ್ಮೋಕಿಂಗ್ನ ಅಪಾಯಗಳ ಕುರಿತು ಸದಸ್ಯರು ವ್ಯಕ್ತಪಡಿಸಿದ ಆತಂಕಕ್ಕೆ ಉತ್ತರಿಸಿದ ಅವರು, ಈ ಚಟವು ಆರೋಗ್ಯದ ಮೇಲೆ ಬೀರುವ ಪರಿಣಾಮ ಹಾಗೂ ಈ ಸಂಬಂಧಿತ ಕಾನೂನು ಸಮಸ್ಯೆಗಳ ಅಧ್ಯಯನ ನಡೆಸಲು ಮೂರು ಸಮಿತಿಗಳನ್ನು ರಚಿಸಲಾಗಿತ್ತು. ಕೆಲ ದೇಶಗಳು ಇ-ಸ್ಮೋಕಿಂಗ್ಗೆ ಅನುಮತಿ ನೀಡಿವೆ, ಮತ್ತೆ ಕೆಲವು ನಿಷೇಧಿಸಿವೆ. ಈ ನಿಟ್ಟಿನಲ್ಲಿ ನಾವು ಕೂಡಾ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಏನಿದು ಇ– ಸಿಗರೇಟ್?
- ಹೊರ ನೋಟಕ್ಕೆ ಸಾಮಾನ್ಯ ಸಿಗರೇಟಿನಂತೆ ಕಂಡರೂ ಅವುಗಳಂತೆ ಹೊಗೆಯಂಥಹದನ್ನು ಹೊರಡಿಸಿದರೂ ಇವು ನಿಕೋಟಿನ್ ಆಧಾರಿತ ಹೊಗೆಯಲ್ಲ. ಇದು ಹಬೆ..ಅಂದರೆ ಇದರಲ್ಲಿ ಕ್ಯಾನ್ಸರ್ ತರಬಹುದಾದ ತಂಬಾಕಿನ ಅಪಾಯಕರ ಅಂಶ ಇರುವುದಿಲ್ಲ. ಇದು ಒಂದು ಚಾಕೊಲೇಟ್ ಪರಿಮಳದ ನಿಕೊಟಿನ್ ಹಬೆ. ಇದಕ್ಕೆ ಬೆಂಕಿ ತಗುಲಿಸುವ ಅಗತ್ಯ ಇಲ್ಲ.
- ಈ ನಿಯಂತ್ರಣದ ಪ್ರತಿಪಾದಕರು ಧೂಮಪಾನವು ಮತ್ತೆ ಹೊಸ ರೂಪದಲ್ಲಿ ಸಾಮಾಜಿಕ ಮನ್ನಣೆ ಗಳಿಸುವತ್ತ ದಾಪುಗಾಲು ಹಾಕುತ್ತಿದೆ ಎನ್ನುತ್ತಾರೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರು ವಿವಿಧ ಸುವಾಸನೆ ಹೊರ ಹೊಮ್ಮಿಸುವ ಇ-ಸಿಗರೇಟಿನ ಪ್ರಿಯರಾಗುತ್ತಿದ್ದಾರೆ.
- ಇ.ಸಿಗರೇಟುಗಳು ಸಾಧಾರಣವಾಗಿ ಸಿಲಿಂಡರಿನ ಆಕಾರದಲ್ಲಿ ಪೆನ್ನಿನಂತೆ ಇರುವವು. ಆದರೆ ವಿವಿಧ ರೂಪದಲ್ಲೂ ಇರಹುದು. ಬಳಸಿ ಬಿಸಾಕುವ ಇಲ್ಲವೆ ಮರುಪೂರಣ ಮಾಡುವ ಎರಡು ರೀತಿಯ. ಸಿಗರೇಟುಗಳು ಇವೆ.
- ಇದರಲ್ಲಿ ಮೂರುಭಾಗಗಳು. ಬ್ಯಾಟರಿ, ಆಟೊಮೈಜರ್ಮತ್ತು ದ್ರವಪೂರೈಸುವ ಸಾಧನ ಇರುವವು.
- ಗುಂಡಿ ಅದುಮಿದಾಗ ದ್ರವವು ಕಾದ ತಂತಿಯ ಮೇಲೆ ಹಾಯ್ದು ಅದು ಆವಿಯಾಗಿ ಹೊರಬರುವುದು. ಅದನ್ನು ಸೇವಿಸಿದಾಗ ಧೂಮಪಾನದ ಅನುಭವ ಆಗುವುದು.ಶೀತ ಆದಾಗ ಬಿಸಿನೀರಲ್ಲಿ ಅಮೃತಾಂಜನ ಹಾಕಿ ಹಬೆಯನ್ನು ಸೇವಿಸುವ ಹಾಗೆ, ಅಥವ ಅಸ್ತಮಾದವರು ಇನ್ಹೇಲರ್ ಬಳಸುವ ಹಾಗೆ. ಇದು ಒಂದು ಹಬೆ ಹೊಮ್ಮಿಸುವ ಎಲೆಕ್ಟ್ರಾನಿಕ್ ಸಾಧನ.
- ಅಟೊಮೈಜರ್,ಕಾರ್ಟೊಮೈಜರ್, ಕ್ಲಿಯರ್ಟೊ ಮೈಜರ್ ಮೊದಲಾದ ಹಲವು ವಿಭಿನ್ನ ತಂತ್ರಜ್ಞಾನ ಬಳಸುವ ಇ. ಸಿಗರೇಟುಗಳಿವೆ
- ಇ.ಸಿಗರೇಟು ಸಾಂಪ್ರದಾಯಿಕ ಧೂಮಪಾನದ ಸಂತಸ ( ಸ್ಪರ್ಶ ಮತ್ತು ಅನುಭವ) ನೀಡುವುದು. ಆದರೆ ತಂಬಾಕಿನಲ್ಲಿರುವ ೧೦೦೦ಕ್ಕೂ ಹೆಚ್ಚಿನ ಅಪಾಯಕಾರಿ ರಸಾಯನಿಕಗಳು ಇದರಲ್ಲಿ ಇಲ್ಲ.ಇದಕ್ಕೆ ಬೆಂಕಿ ತಗುಲಿಸ ಬೇಕಿಲ್ಲ…ಶ್ವಾಸಕೋಶಕ್ಕ ಧಕ್ಕೆಬಾರದು ಅನಿಯಂತ್ರಿತ ಕೆಮ್ಮು ಇರದು.
- ಇ.ಸಿಗರೇಟಿನಲ್ಲಿ ಆವಿಯನ್ನು ಉಂಟುಮಾಡುವ ದ್ರವವನ್ನು ಇ-.ಜ್ಯೂಸ್ ಅಥವ ಇ. ದ್ರವ ಎನ್ನವರು.ಅದುಪ್ರೊಪಿಲಿನ್, ಗ್ಲಿಜರಿನ್ ಅಥವ ಪಾಲಿಥಿಲಿನ್ ಗ್ಲೈಕಾಲ್ ಆಗಿರುವುದು ಜೊತೆಗೆ ಬೇಕಾದ ಪರಿಮಳ ಮತ್ತು ಬೇಕೆಂದರೆ ವಿವಿಧ ಪ್ರಭಲತೆಯ ನಿಕೊಟಿನ್ ಸಾರವೂ ಇರುತ್ತದೆ.
- ಈ ದ್ರಾವಣವನ್ನು ಶೀಶೆ ಅಥವ ಮೊದಲೇ ಭರ್ತಿ ಮಾಡಿದ ಕ್ಯಾಟ್ರಿಜ್ನಲ್ಲಿ ದೊರೆಯುವುದು.ಅದರ ಮೇಲೆ mg/ml ಎಂದು ನಿಕೋಟಿನ್ ಪ್ರಮಾಣವನ್ನು ನಮೂದಿಸಿರುವರು.
- ಇದರಲ್ಲಿ ನೀರು ನಿಕೊಟಿನ್ ಮತ್ತು ಪ್ರೊಪಿಲಿನ್ ಗ್ಲೈ ಕಾಲ್ ( ಜಲಾಧಾರಿತ ಔಷಧಿಗಳಲ್ಲಿ ಬಳಸುವ ಮತ್ತುಆರೋಗ್ಯಕ್ಕೆ ಹಾನಿಮಾಡದ ವಸ್ತು )ಇರುವವು.
- ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಇ-ಸಿಗರೆಟ್ ನಲ್ಲಿ ಅದೇ ರೀತಿಯ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.
3.ಇ-ಕಾರು; ಭಾರತ ಏನನ್ನು ಕಲಿತುಕೊಳ್ಳಬಹುದು?
ಸನ್ನಿವೇಶ
- 2030ರ ಹೊತ್ತಿಗೆ ಭಾರತವು ಸಂಪೂರ್ಣವಾಗಿ ವಿದ್ಯುತ್ ಕಾರುಗಳನ್ನು ಮಾತ್ರ ಮಾರಾಟ ಮಾಡುವ ಮಹಮಹತ್ವಾಕಾಂಕ್ಷೆಯ ಗುರಿಯನ್ನಿಟ್ಟುಕೊಂಡಿದೆ.
ಪ್ರಮುಖ ಸಂಗತಿಗಳು
- ಇ-ವಾಹನಗಳತ್ತ ಕಣ್ಣಾಯಿಸಿದಾಗ ಮುಂಚೂಣಿಯಲ್ಲಿರುವ ನಾರ್ವೆ ದೇಶವು ಸದೃಢವಾದ ಎಲೆಕ್ಟ್ರಿಕ್ ಮೂಲ ಸೌಕರ್ಯಗಳನ್ನು ಹೊಂದಿದೆ. 1990ರ ದಶಕಗಳಲ್ಲಿ ಆರಂಭವಾದ ನಾರ್ವೆ ಯೋಜನೆಯು 2025ರ ವೇಳೆಗೆ ಸಂಪೂರ್ಣ ಇ-ಕಾರುಗಳ ಚಾಲನೆಯ ಗುರಿಯನ್ನಿಟ್ಟುಕೊಂಡಿದೆ.
- ವಿದ್ಯುತ್ ಚಲನಶೀಲತೆ ಆಳವಡಿಸಿಕೊಳ್ಳುವಲ್ಲಿ ನಾರ್ವೆ ಅನುಸರಿಸಿರುವ ತಂತ್ರಗಾರಿಕೆಯನ್ನು ಅರಿತುಕೊಳ್ಳಲು ನಮ್ಮ ಪ್ರತಿನಿಧಿಗಳು ನೇರವಾಗಿ ನಾರ್ವೆಗೆ ಪ್ರಯಾಣ ಬೆಳೆಸಿತ್ತು. ವಿವಿಧ ವಿಭಾಗದವರೊಂದಿಗೆ ಚರ್ಚಿಸಿದ ಬಳಿಕ ತಿಳಿದು ಬಂದಿರುವ ವಿಚಾರವೆಂದರೆ ಬಲವಾದ ರಾಜಕೀಯ ಇಚ್ಛಾಶಕ್ತಿ, ಸರಕಾರದ ತೆರಿಗೆ ಪ್ರೋತ್ಸಾಹ ಮತ್ತು ವಿದ್ಯುತ್ ಮೂಲ ಸೌಕರ್ಯಗಳ ವೃದ್ಧಿಯಿಂದಾಗಿ ಈ ಮಹತ್ತರ ಯೋಜನೆ ಫಲಪ್ರದವಾಗಿದೆ.
- ಪರಿಸರ ಪ್ರಜ್ಞೆಯ ನಾಗರಿಕರು ಸಹ ಪ್ರಮುಖ ಪಾತ್ರ ವಹಿಸಿರುವುದು ಇಲ್ಲಿ ಕಂಡುಬಂದಿರುವ ಗಮನಾರ್ಹ ಅಂಶ. ಸಮೀಕ್ಷೆಯು ಸೂಚಿಸುವ ಪ್ರಕಾರ ನಾರ್ವೆಯಲ್ಲಿ ಅತಿ ಹೆಚ್ಚು ಮಾಲಿನ್ಯದ ವಾಹನಗಳ ಮೇಲೆ ಅತೀವ ತೆರಿಗೆ ವಿಧಿಸಲಾಗುತ್ತದೆ ಅಥವಾ ಮುಟ್ಟಗೋಲುಗೊಳಿಸಲಾಗುತ್ತದೆ.
- ಇವೆಲ್ಲದಕ್ಕೂ ಮಿಗಿಲಾಗಿ ಸಾರ್ವಜನಿಕರಿಂದ ಬೆಂಬಲ ಸಿಗುತ್ತಿದೆ. ಚೀನಾ, ಯುರೋಪ್ ಮತ್ತು ಅಮೆರಿಕ ಇ-ವಾಹನದತ್ತ ಬದಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಬೇಕು. ಚಾಲನಾ ವೆಚ್ಚ ಕಡಿಮೆಯಾಗಬೇಕು
ಮೂಲಸೌಕರ್ಯ ಕೊರತೆ.
- ಭಾರತವು ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ಗಳ ಕೊರತೆಯನ್ನು ಎದುರಿಸುತ್ತಿದೆ. ಇನ್ನು ಬೇಸರದ ಸಂಗತಿಯೆಂದರೆ ಸದ್ಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಏಕೈಕ ಸಂಸ್ಥೆ ಮಹೀಂದ್ರ ಆ್ಯಂಡ್ ಮಹೀಂದ್ರ ಮಾತ್ರವಾಗಿದೆ.
- ಟಾಟಾ ಮೋಟಾರ್ಸ್ ಸಹ ವಿದ್ಯುತ್ ವಾಹನದತ್ತ ಒಲವು ತೋರಿದರೂ ಇದುವರೆಗೆ ವಾಣಿಜ್ಯ ಮಾರಾಟದತ್ತ ಕಾಲಿಟ್ಟಿಲ್ಲ. ಮಹೀಂದ್ರ ಇ-ವೆರಿಟೊದಂತೆಯೇ ಸಂಸ್ಥೆಯು ಈಗಷ್ಟೇ ಟಾಟಾ ಟಿಗೋರ್ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಿದೆ. ಸರಕಾರದ 2030 ಎಲೆಕ್ಟ್ರಿಕ್ ಯೋಜನೆಗೆ ದೇಶದ ಅತಿ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ ಸಹ ಕೈಜೋಡಿಸಿದರೂ ಇದುವರೆಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಯಾವುದೇ ಯೋಜನೆ ಘೋಷಿಸದಿರುವುದು ಖೇದಕರ ಸಂಗತಿ.
- ನಾರ್ವೆ ದೇಶವನ್ನೇ ಉದಾಹರಣೆಯಾಗಿ ಪರಿಗಣಿಸಿದಾಗ ನಿರ್ಮಾಣ ಒಂದು ಸಮಸ್ಯೆಯಲ್ಲ ಎಂಬುದು ತಿಳಿದು ಬರುತ್ತದೆ. ಯಾಕೆಂದರೆ ನಾರ್ವೆಯಲ್ಲಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಘಟಕಗಳಿಲ್ಲ. ಆದರೂ ಎಲೆಕ್ಟ್ರಿಕ್ ಮೂಲ ಸೌಕರ್ಯ ವೃದ್ಧಿಸುವ ಮತ್ತು ತೆರಿಗೆ ವಿನಾಯಿತಿ ಮೂಲಕ ತನ್ನ ಗುರಿಯತ್ತ ತುಲುಪುತ್ತಿದೆ.
- ನಾರ್ವೆಯಲ್ಲಿ ಮಾಲಿನ್ಯ ಕಾರುಗಳಿಗೆ ಅತಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಅಂದರೆ ಡೀಸೆಲ್ ಕಾರುಗಳ ಮೇಲೆ ಆರು ಪಟ್ಟು ಹೆಚ್ಚು ತೆರಿಗೆ ವಿಧಿಸಲಾಗುತ್ತದೆ.
ನಿರೀಕ್ಷೆಯಲ್ಲಿ ಭಾರತ..
- 2020ರ ವೇಳೆಗೆ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ವೆಚ್ಚ ಗಣನೀಯವಾಗಿ ಕುಸಿತ ಕಾಣುವ ನಿರೀಕ್ಷೆಯನ್ನು ಹೊಂದಲಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳು ಅಗ್ಗದ ದರದಲ್ಲಿ ಲಭ್ಯವಾಗಲು ನೆರವಾಗಲಿದೆ. ಸದ್ಯಕ್ಕೆ ಲಿಥಿಯಂ-ಇಯಾನ್ ಬ್ಯಾಟರಿಗಳು ದುಬಾರಿ ವೆಚ್ಚವಾಗಿದೆ.
- ಈ ಎಲ್ಲದರ ನಿಟ್ಟಿನಿಂದ ಸುಸ್ಥಿರ ಪರಿಸರಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯಗಳ ವೃದ್ಧಿಯತ್ತ ಸರಕಾರ ಈ ಕೂಡಲೇ ಪ್ರಬಲ ಇಚ್ಛಾಶಕ್ತಿಯೊಂದಿಗೆ ಕಾರ್ಯ ಪ್ರವೃತ್ತರಾಗಬೇಕಾಗಿರುವುದು ಅತ್ಯಂತ ಮುಖ್ಯ.
4. 5 ಲಕ್ಷ ಬಿಟ್ ಕಾಯಿನ್ ಬಳಕೆದಾರರಿಗೆ ಐಟಿ ನೋಟಿಸ್
ಪ್ರಮುಖ ಸುದ್ದಿ
- ಬಿಟ್ ಕಾಯಿನ್ ಹೂಡಿಕೆ ಮತ್ತು ವಹಿವಾಟಿನ ಮೇಲೆ ತನಿಖೆ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆಯು, ದೇಶದಲ್ಲಿ ಬಿಟ್ ಕಾಯಿನ್ ವಹಿವಾಟು ನಡೆಸಿರುವ 5 ಲಕ್ಷಕ್ಕೂ ಹೆಚ್ಚು ಶ್ರೀಮಂತರಿಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಮುಖ ಸಂಗತಿಗಳು
- ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಬೆಂಗಳೂರು ಸೇರಿದಂತೆ 9 ನಗರಗಳಲ್ಲಿ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳ ಪರಿಶೀಲನೆ ನಡೆಸಿತ್ತು. ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.
- ಈ ವಿನಿಮಯ ಕೇಂದ್ರಗಳಲ್ಲಿ ಸುಮಾರು 20 ಲಕ್ಷ ಮಂದಿ ನೋಂದಣಿ ಮಾಡಿದ್ದು, 4ರಿಂದ 5 ಲಕ್ಷ ಮಂದಿ ಸಕ್ರಿಯರಾಗಿದ್ದಾರೆ. ನೋಟಿಸ್ ಪಡೆದವರು ಬಿಟ್ ಕಾಯಿನ್ ಹೂಡಿಕೆಗೆ ಸಂಬಂಧಿಸಿ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ನೀಡಬೇಕಾಗುತ್ತದೆ ಎಂದು ತಿಳಿಸಿವೆ.
ಏನಿದು ಬಿಟ್ ಕಾಯಿನ್?
- ಇದೊಂದು ವಿಶ್ವದ ಮೊದಲ, ಯಾರ ಅಂಕೆಗೂ ಸಿಗದ ವಿಕೇಂದ್ರೀಕೃತ ಖಾಸಗಿ ಡಿಜಿಟಲ್ ಕರೆನ್ಸಿ. ಇದಕ್ಕೆ ಭೌತಿಕ ಮುಖಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್, ರೂಪಾಯಿ) ಪರ್ಯಾಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್ನೆಟ್ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿಗಳಿಗೆ ‘ಬಿಟ್ ಕಾಯಿನ್’ ಎನ್ನುತ್ತಾರೆ. ಬೇರೆ, ಬೇರೆ ಹೆಸರಿನಲ್ಲಿ ಇಂತಹ ಕರೆನ್ಸಿಗಳು ಬಳಕೆಗೆ ಬಂದಿದ್ದರೂ, ಹೂಡಿಕೆದಾರರಲ್ಲಿ ಬಿಟ್ಕಾಯಿನ್ ಹೆಚ್ಚು ಜನಪ್ರಿಯವಾಗಿದೆ.
- ನಮ್ಮ ಕಿಸೆ, ಪರ್ಸ್ನಲ್ಲಿ ಇರುವ ನಾಣ್ಯ ಅಥವಾ ನೋಟುಗಳಂತೆ ಈ ಕರೆನ್ಸಿಗೆ ಭೌತಿಕ ಸ್ವರೂಪ ಇಲ್ಲ. ಇದು ಅಂತರ್ಜಾಲದಲ್ಲಿಮಾತ್ರ ಅಸ್ತಿತ್ವದಲ್ಲಿ ಇರುತ್ತದೆ. ನಮ್ಮ ಆರ್ಬಿಐನಂತಹ ಇತರ ಕೇಂದ್ರೀಯ ಬ್ಯಾಂಕ್ ಮತ್ತು ಸರ್ಕಾರಗಳು ಇವುಗಳನ್ನು ಮುದ್ರಿಸುವುದಿಲ್ಲ. ಅಂದರೆ, ಇವು ಚಲಾವಣೆಯಲ್ಲಿ ಇರುವ ಮಾನ್ಯತೆ ಪಡೆದ ಕರೆನ್ಸಿ ಆಗಿರುವುದಿಲ್ಲ. ಹೂಡಿಕೆದಾರರ ಖರೀದಿ ಮತ್ತು ಮಾರಾಟ ಆಧರಿಸಿ ಇವುಗಳ ಬೆಲೆ ನಿಗದಿಯಾಗುತ್ತದೆ. ತೆರಿಗೆ ಪಾವತಿಸಲು, ಸಾಲ ಮರುಪಾವತಿಸಲೂ ಇವುಗಳನ್ನು ಬಳಸುವಂತಿಲ್ಲ. ಯುರೋಪಿನ ಕೆಲ ದೇಶಗಳಲ್ಲಿ ಬಿಟ್ಕಾಯಿನ್ ಎಟಿಎಂಗಳಿವೆ. ಈ ಎಟಿಎಂಗಳು ವರ್ಚುವಲ್ ಟೋಕನ್ಸ್ ನೀಡುತ್ತವೆ.
ಬಳಕೆ ಹೇಗೆ?
- ಮೊಬೈಲ್ ಫೋನ್ಗಳನ್ನೇ ಬಿಟ್ಕಾಯಿನ್ ಡೆಬಿಟ್ ಕಾರ್ಡ್ನಂತೆ ಬಳಸಲೂ ಅವಕಾಶ ಇದೆ. ಇದಕ್ಕೆ ಯಾರ ಸಮ್ಮತಿಯೂ ಬೇಕಾಗಿಲ್ಲ. ಗಡಿಯಾಚೆಗಿನ ವಹಿವಾಟನ್ನೂ ಇವುಗಳ ಮೂಲಕ ಸುಲಭವಾಗಿ ನಿರ್ವಹಿಸಬಹುದು.
ಇವುಗಳ ಸೃಷ್ಟಿ ಹೇಗೆ?
- ಅದೊಂದು ತುಂಬ ಸಂಕೀರ್ಣ ಸ್ವರೂಪದ ಪ್ರಕ್ರಿಯೆ. ಗಣಿತ ಸೂತ್ರ ಮತ್ತು ತಂತ್ರಜ್ಞಾನದ ನೆರವಿನಿಂದ ಇವುಗಳನ್ನು ಸೃಷ್ಟಿಸಲಾ
- ಗುವುದು. ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಫ್ಟ್ವೇರ್ ನೆರವು ಪಡೆಯಲಾಗುತ್ತದೆ. ಇದಕ್ಕೆ ಮೈನಿಂಗ್ (mining) ಎನ್ನುತ್ತಾರೆ. ಕಂಪ್ಯೂಟರ್ ಜಾಲದ ಮೂಲಕ ಅವುಗಳ ವಹಿವಾಟನ್ನು ನಿರ್ವಹಿಸಲಾಗುತ್ತಿದೆ. ಸದ್ಯಕ್ಕೆ 65 ಕೋಟಿ ಬಿಟ್ಕಾಯಿನ್ಗಳು ಚಲಾವಣೆಯಲ್ಲಿ ಇವೆ.
ಎಲ್ಲೆಲ್ಲಿ ಚಲಾವಣೆ ಇದೆ?
- ಮಾನ್ಯತೆ ಪಡೆದ ಕೆಲ ಸಂಸ್ಥೆಗಳು ತಮ್ಮ ವಹಿವಾಟಿನಲ್ಲಿ ಬಿಟ್ ಕಾಯಿನ್ ಸ್ವೀಕರಿಸಲು ಆರಂಭಿಸಿವೆ. ಸರಕು ಮತ್ತು ಸೇವೆಗಳ ಖರೀದಿಗೂ ಬಳಸಬಹುದು. ಮೈಕ್ರೊಸಾಫ್ಟ್ ಮತ್ತು ಪ್ರವಾಸಿ ಸಂಸ್ಥೆ ಎಕ್ಸ್ಪೇಡಿಯಾನಂತಹ ಬಹುರಾಷ್ಟ್ರೀಯ ಸಂಸ್ಥೆಗಳು, ಒಂದೆರಡು ರೆಸ್ಟೊರಂಟ್ಸ್, ಲಂಡನ್ನಿನ ಕಲಾ ಗ್ಯಾಲರಿಯಲ್ಲಿ ಇವುಗಳ ಬಳಕೆ ನಿಧಾನವಾಗಿ ಜಾರಿಗೆ ಬರುತ್ತಿದೆ. ಬಿಟ್ ಕಾಯಿನ್ ಹೊಂದಿರುವವರಲ್ಲಿ ಬಹುಸಂಖ್ಯಾತರು ಸರಕುಗಳ ಖರೀದಿಗೆ ಇವುಗಳನ್ನು ಬಳಸುತ್ತಿಲ್ಲ. ಹೂಡಿಕೆ ಉದ್ದೇಶಕ್ಕೆ ಮಾತ್ರ ಇವುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಬೆಲೆ ಎಷ್ಟು?
- 2009ರಲ್ಲಿ ಅಸ್ತಿತ್ವಕ್ಕೆ ಬಂದಾಗ ಇದರ ಬೆಲೆ ಮೊದಲು ತುಂಬ ಅಗ್ಗವಾಗಿತ್ತು. 2011ರಲ್ಲಿ 2 ಡಾಲರ್ಗೆ ಒಂದು ಬಿಟ್ಕಾಯಿನ್ ದೊರೆಯುತ್ತಿತ್ತು. ಈಗ ಇದು 18 ಸಾವಿರ ಡಾಲರ್ವರೆಗೂ ಏರಿಕೆಯಾಗಿತ್ತು.
ದುರ್ಬಳಕೆ ಹೇಗೆ?
- ಹೂಡಿಕೆದಾರರು ಹೆಚ್ಚು ಲಾಭ ಗಳಿಸಲು ಇವುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ಕಳ್ಳಸಾಗಾಣಿಕೆಯಲ್ಲಿಯೂ ಇವುಗಳನ್ನು ಬಳಸಲಾಗುತ್ತಿದೆ. ಇಲ್ಲಿ ವಹಿವಾಟು ನಡೆಸುವವರು ಅನಾಮಧೇಯರಾಗಿಯೇ ಉಳಿಯುವುದರಿಂದ ಬಳಕೆದಾರರನ್ನು ಗುರುತಿಸಲು ಸಾಧ್ಯವಾಗಲಾರದು.
ಅಪಾಯಗಳೇನು?
- ಇವುಗಳಿಗೆ ಸದ್ಯಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅಂತರ್ಜಾಲಕ್ಕೆ ಕನ್ನ ಹಾಕುವವರು (hackers) ಈ ಕರೆನ್ಸಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವ ಅಪಾಯ ಇರುತ್ತದೆ. 2014ರಲ್ಲಿ ಮೌಂಟ್ ಗಾಕ್ಸ್ ವಿನಿಮಯ ಕೇಂದ್ರದಲ್ಲಿನ 50 ಲಕ್ಷ ಬಿಟ್ಕಾಯಿನ್ಗಳನ್ನು ಹ್ಯಾಕರ್ಸ್ ಕದ್ದಿದ್ದರು. 24 ಸಾವಿರ ಗ್ರಾಹಕರು ಲಕ್ಷಾಂತರ ಡಾಲರ್ ಕಳೆದುಕೊಂಡಿದ್ದರು.
- ಈಗ ವಿಶ್ವದ ಅತಿದೊಡ್ಡ ಪದಾರ್ಥ ವಿನಿಮಯ ಕೇಂದ್ರವು ಬಿಟ್ಕಾಯಿನ್ ವಾಯಿದಾ ವಹಿವಾಟು ಆರಂಭಿಸಿರುವುದು ಹೂಡಿಕೆದಾರರಲ್ಲಿ ಹೊಸ ಆತಂಕ ಮೂಡಿಸಿದೆ.
- ಇದೊಂದು ಸಂಪೂರ್ಣ ಸಟ್ಟಾ ವ್ಯಾಪಾರವಾಗಿರುವುದರಿಂದ ಬಿಟ್ಕಾಯಿನ್ ಬೆಲೆ ಅತಿ ಎನ್ನುವಷ್ಟು ಭಾರಿ ಏರಿಳಿತ ಕಾಣಲಿದೆ. ಒಂದು ವೇಳೆ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದರೆ ಹೂಡಿಕೆದಾರರ ಸಂಪತ್ತು ಅಪಾರ ಪ್ರಮಾಣದಲ್ಲಿ ಕರಗಿ ಹೋಗಲಿದೆ. ಇದರ ಜತೆಗೆ ಹ್ಯಾಕ್ ಮಾಡುವ, ಕದಿಯುವ ಅಪಾಯವೂ ಇರಲಿದೆ.
5.ಭದ್ರತಾ ಮಂಡಳಿ ನಿರ್ಣಯ ವಿರುದ್ಧ ಅಮೆರಿಕದ ವಿಟೋ
ಪ್ರಮುಖ ಸುದ್ದಿ
- ಇಸ್ರೇಲ್ ರಾಜಧಾನಿಯಾಗಿ ಜೆರು ಸಲೇಂ ಗುರುತಿಸಿರುವ ಟ್ರಂಪ್ ನಡೆ ಹಿಂತೆಗೆತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಂಡಿಸಲು ಮುಂದಾಗಿದ್ದ ನಿರ್ಣಯದ ವಿರುದ್ಧವಾಗಿ ಅಮೆರಿಕ ವಿಟೋ ಅಧಿಕಾರ ಬಳಸಿದೆ. ಕಳೆದ 6 ವರ್ಷಗಳಲ್ಲಿ ಅಮೆರಿಕ ಇದೇ ಮೊದಲ ಸಲ ವಿಟೋ ಅಧಿಕಾರ ಚಲಾಯಿಸಿದೆ.
ಪ್ರಮುಖ ಅಂಶಗಳು
- ಅಮೆರಿಕ ಸಾರ್ವಭೌಮತ್ವ ಸಂರಕ್ಷಣೆಗಾಗಿ ನಾವು ಹೀಗೆ ಮಾಡಿದ್ದೇವೆ. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿರುವ ಅಮೆರಿಕಗೆ ಮುಖಭಂಗವಾಗದಂತೆ ತಡೆಯಲು ವಿಟೋ ನಮಗೆ ಅನಿವಾರ್ಯವಾಗಿತ್ತು. ಆದರೆ ಮಂಡಳಿ ಎದುರು ಅಮೆರಿಕಕ್ಕೆ ಅವಮಾನ ಮಾಡಲಾಗಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಬ್ರಿಟನ್, ಜಪಾನ್, ಫ್ರಾನ್ಸ್ ಸೇರಿ ಮಂಡಳಿಯಲ್ಲಿರುವ 14 ಅಮೆರಿಕ ಮಿತ್ರ ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದು ವಿಶೇಷ. ಅಮೆರಿಕದ ಏಕಪಕ್ಷೀಯ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಬ್ರಿಟನ್ ಮೂಗುಮುರಿದಿದೆ.
- ಡಿ. 6ರಂದು ಟ್ರಂಪ್ ಜೆರುಸಲೇಂನ್ನು ಇಸ್ರೇಲ್ನ ನೂತನ ರಾಜಧಾನಿ ಎಂದು ಗುರುತಿಸಿ, ಅಮೆರಿಕ ರಾಯ ಭಾರ ಕಚೇರಿಯನ್ನು ಟೆಲ್ ಅವೀವ್ನಿಂದ ಸ್ಥಳಾಂತರಕ್ಕೆ ಆದೇಶಿಸಿದ್ದರು.
ಏನಿದು ವಿಟೋ ಅಧಿಕಾರ ?
- ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯರಿಗೆ ಮಾತ್ರ ನೀಡಲಾಗುವ ಪರಮೋಚ್ಚ ಹಕ್ಕು. ಸ್ವತಂತ್ರ ನಿರ್ಣಯಗಳನ್ನು ಮಂಡಳಿಯಲ್ಲಿ ಅನುಮೋದನೆಗಾಗಿ ಮಂಡಿಸಿದಾಗ ಕಾಯಂ ರಾಷ್ಟ್ರಗಳ ಸಮ್ಮತಿಯಿಲ್ಲದೆ ಅದನ್ನು ಅಂಗೀಕರಿಸುವಂತಿಲ್ಲ.
- ಒಂದು ವೇಳೆ ನಿರ್ಣಯದ ವಿರುದ್ಧ ಅಸಮಾಧಾನವಿದ್ದರೆ, ಅದರ ಅನುಮೋದನೆ ತಡೆಯಲು ರಾಷ್ಟ್ರಗಳು ವಿಟೋ ಅಧಿಕಾರ ಬಳಸುತ್ತವೆ. ಅಸಮ್ಮತಿಗೆ ಕಾರಣವಾಗಿರುವ ಅಂಶ ಇತ್ಯರ್ಥ ಆಗುವವರೆಗೂ ನಿರ್ಣಯಕ್ಕೆ ವಿಟೋ ಮೂಲಕ ಹಾಕಲಾಗಿರುವ ತಡೆ ಮುಂದುವರಿಯುತ್ತದೆ. ಪ್ರಸ್ತುತ ಭದ್ರತಾ ಮಂಡಳಿಯಲ್ಲಿ 5 ರಾಷ್ಟ್ರಗಳಿಗೆ ಮಾತ್ರ ವಿಟೋ ಅಧಿಕಾರವಿದೆ.
6.ಕನಿಷ್ಠ ಪರಿಹಾರ ನಿಗದಿಗೆ ನಿಯಮ ರೂಪಿಸದ ಕೇಂದ್ರ ಸರಕಾರ
ಪ್ರಮುಖ ಸುದ್ದಿ
- ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ.ಆದರೆ ಅಂತಹ ಪ್ರಕರಣಗಳಲ್ಲಿ ಸೂಕ್ತ ಪರಿಹಾರ ನಿಗದಿಗೆ ಕೇಂದ್ರ ಸರಕಾರ ನಿಯಮಗಳನ್ನು ರೂಪಿಸದ ಪರಿಣಾಮ, ಸಂತ್ರಸ್ತ ಕುಟುಂಬಗಳಿಗೆ ಉತ್ತಮ ಪರಿಹಾರ ‘ಗಗನಕುಸುಮ’ವಾಗಿದೆ.
ಪ್ರಮುಖ ಅಂಶಗಳು
- ಸುಪ್ರೀಂಕೋರ್ಟ್ ಪದೇಪದೆ ಈ ಕುರಿತು ಕೇಂದ್ರ ಸರಕಾರಕ್ಕೆ ನಿರ್ದೇಶನಗಳನ್ನು ನೀಡಿದ್ದಾಗ್ಯೂ ಸರಕಾರ, 23 ವರ್ಷಗಳಿಂದ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ಮಾಡಿ ಪರಿಹಾರ ದರ ನಿಗದಿಪಡಿಸಿಲ್ಲ.ಅದರಿಂದಾಗಿ ಕೋರ್ಟ್ಗಳಲ್ಲೂ ಗೊಂದಲ ಏರ್ಪಡುವ ಜೊತೆಗೆ ಒಂದೊಂದು ನ್ಯಾಯಾಲಯಗಳು ಒಂದೊಂದು ಬಗೆಯ ಪರಿಹಾರವನ್ನು ನಿಗದಿ ಮಾಡುತ್ತಿವೆ.
- ಇಂತಹ ಹಲವು ಪ್ರಕರಣಗಳಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗಳು ಆದೇಶಿಸುವ ಪರಿಹಾರ ಮೊತ್ತವನ್ನು ಪ್ರಶ್ನಿಸಿ,ಒಂದೋ ಸಂತ್ರಸ್ತರು ಅಥವಾ ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲೇರುವುದು ಸರ್ವೇ ಸಾಮಾನ್ಯವಾಗಿದೆ. ಹೈಕೋರ್ಟ್ನಲ್ಲಿ ಇಂತಹ ಪ್ರಕರಣಗಳು ದಿನನಿತ್ಯ ಬರುತ್ತಲೇ ಇವೆ. ಬಹುತೇಕ ಪ್ರಕರಣಗಳು ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಾಗಲೂ, ಕೇಂದ್ರ ಸರಕಾರ ಇನ್ನೂ ಏಕೆ ಪರಿಹಾರ ಮೊತ್ತ ನಿಗದಿಗೆ ನಿಯಮಗಳನ್ನು ರೂಪಿಸಿಲ್ಲ ಎಂಬ ಪ್ರಶ್ನೆ ಉದ್ಘವವಾಗುತ್ತದೆ.
ಸುಪ್ರೀಂಕೋರ್ಟ್ ಆದೇಶವೇನು?
- ರಸ್ತೆ ಅಪಘಾತ ಪ್ರಕರಣಗಳಲ್ಲಿ ಮಕ್ಕಳು ಮೃತಪಟ್ಟ ಸಂದರ್ಭದಲ್ಲಿ ಪರಿಹಾರ ನಿಗದಿಗೆ 1994ರಲ್ಲೇ ಸುಪ್ರೀಂಕೋರ್ಟ್, ಕೇಂದ್ರ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ಮಾಡುವಂತೆ ಆದೇಶಿಸಿತ್ತು. ಆದರೂ ಸಹ ಕೇಂದ್ರ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ.
- ಆನಂತರ 2013ರಲ್ಲಿ ಪುಟ್ಟಮ್ಮ ವರ್ಸಸ್ ಕೆ.ಎಲ್.ನಾರಾಯಣರೆಡ್ಡಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್,ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 163(ಎ)(3)ಗೆ ತಿದ್ದುಪಡಿ ಮಾಡದಿರುವ ಕೇಂದ್ರ ಸರಕಾರದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿತ್ತು.ಅಷ್ಟೇ ಅಲ್ಲದೆ, ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದ ಕೋರ್ಟ್, ಪ್ರಸ್ತುತ ಇರುವ ಜೀವನ ನಿರ್ವಹಣಾ ವೆಚ್ಚ, ಮಕ್ಕಳ ವಯಸ್ಸು ಮತ್ತಿತರ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಾನೂನು ತಿದ್ದುಪಡಿ ಮಾಡಲೇಬೇಕು ಎಂದು ಆದೇಶಿಸಿತ್ತು.
- ಅಲ್ಲದೆ, ಕೇಂದ್ರ ಸರಕಾರ ತಿದ್ದುಪಡಿ ಮಾಡಿ ನಿಯಮಗಳನ್ನು ರೂಪಿಸುವವರೆಗೆ 5 ವರ್ಷದೊಳಗಿನ ಮಕ್ಕಳಿಗೆ 1ಲಕ್ಷ ಹಾಗೂ ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ 5ಲಕ್ಷ ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. 2013ರಿಂದ ಬಹುತೇಕ ಅದೇ ನಿಯಮಗಳನ್ನು ಎಂವಿಸಿಟಿ ಕೋರ್ಟ್ಗಳು ಪಾಲನೆ ಮಾಡುತ್ತಿವೆ.
ನ್ಯಾಯಾಲಯಗಳಲ್ಲೂ ಗೊಂದಲ
- ಒಂದು ಅಪರೂಪದ ಪ್ರಕರಣದಲ್ಲಿ ಹೈಕೋರ್ಟ್ 5 ಲಕ್ಷ ರೂ. ಪರಿಹಾರವನ್ನು ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿತ್ತು. ಹಾಗಾಗಿ ಬಹುತೇಕ ವಕೀಲರು ಅದೇ ನಿಯಮವನ್ನು ಮುಂದಿಟ್ಟುಕೊಂಡು ಪರಿಹಾರದ ಬೇಡಿಕೆಯೊಡ್ಡುತ್ತಿದ್ದಾರೆ. ನ್ಯಾಯಾಲಯಗಳು ಕೂಡ ಒದೊಂದು ಪ್ರಕರಣಗಳಲ್ಲಿ ಒಂದೊಂದು ಮೊತ್ತದ ಪರಿಹಾರವನ್ನು ಆದೇಶಿಸುತ್ತಿವೆ. ಇದರಿಂದಾಗಿ ಒಟ್ಟಾರೆ ಗೊಂದಲ ಏರ್ಪಟ್ಟಿದೆ.
- ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕೆಂದರೆ ಕೇಂದ್ರ ಸರಕಾರ ಆದಷ್ಟು ಬೇಗ ಕಾನೂನು ತಿದ್ದುಪಡಿ ಮಾಡಬೇಕು ಎನ್ನುತ್ತಾರೆ ಕಾನೂನು ತಜ್ಞರು. ಇಲ್ಲವಾದರೆ ಕೋರ್ಟ್ಗಳು ಒಂದೊಂದು ಪ್ರಕರಣಗಳಲ್ಲಿ ಒಂದೊಂದು ಮೊತ್ತದ ಪರಿಹಾರಕ್ಕೆ ಆದೇಶ ನೀಡುತ್ತದೆ, ಕೆಲವರಿಗೆ ದೊಡ್ಡ ಮೊತ್ತ, ಕೆಲವರಿಗೆ ಅಲ್ಪ ಮೊತ್ತದ ಪರಿಹಾರ ಸಿಗುತ್ತದೆ ಎಂಬುದು ಅವರ ಅಭಿಪ್ರಾಯ.
- ”ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಮಕ್ಕಳಿಗೆ ಪರಿಹಾರ ನೀಡುವ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ಮಾಡಿ ಪರಿಹಾರ ನಿಗದಿಗೆ ಮಾನದಂಡದ ನಿಯಮಗಳನ್ನು ರೂಪಿಸದೇ ಇರುವುದರಿಂದ ಕೋರ್ಟ್ಗಳಿಂದಲೂ ಗೊಂದಲಕಾರಿ ಆದೇಶಗಳು ಬರುತ್ತಿವೆ. ಹಾಗಾಗಿ ಕೇಂದ್ರ ಸರಕಾರ ಆದಷ್ಟು ಬೇಗ ನಿಯಮ ರೂಪಿಸಿದರೆ ಒಳ್ಳೆಯದು”